ಮುಂಬೈಯಲ್ಲಿ ಜಾಕಿರಗೆ 35 ಆಸ್ತಿ

ಮುಂಬೈ : ವಿವಾದಾಸ್ಪದ  ಮುಸ್ಲಿಂ ಪ್ರವಚನಕಾರ ಝಾಕಿರ್ ನಾಯ್ಕ್ ಒಟ್ಟು 37 ದೊಡ್ಡ ಮಟ್ಟದ ಆಸ್ತಿ ಹೊಂದಿದ್ದು, ಅವುಗಳ ಪೈಕಿ ಬಹುತೇಕ ಆಸ್ತಿಗಳು ಮಹಾರಾಷ್ಟ್ರದಲ್ಲಿವೆ ಎಂದು ರಾಷ್ಟ್ರೀಯ ತನಿಖಾ ದಳ (ಎನ್ ಐ ಎ) ಮೂಲಗಳು ಹೇಳಿವೆ.

ನಾಯ್ಕ್‍ಗೆ ಸೇರಿದ 25 ಫ್ಲ್ಯಾಟುಗಳು ಮುಂಬೈಯಲ್ಲಿವೆ. “ನಾಯ್ಕನಲ್ಲಿರುವ ಎಲ್ಲ ಆಸ್ತಿಯ ಮೌಲ್ಯ ಸುಮಾರು 100 ಕೋಟಿ ರೂ ಮಿಕ್ಕಿದೆ” ಎಂದು ಎನ್ ಐ ಎ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ಹೇಳಿದರು.

ನಾಯ್ಕ್ ಧರ್ಮ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದ 14,000 ಟೇಪುಗಳನ್ನು ಮುಟ್ಟುಗೋಲು ಹಾಕಲಾಗಿದೆ. ಗುರುವಾರದಂದು ಎನ್ ಐ ಎ ಅಧಿಕಾರಿಗಳ ತಂಡದ ಮುಖ್ಯಸ್ಥ ಶರದ್ ಕುಮಾರ್ ಮುಂಬೈ ಪೊಲೀಸ್ ಅಧಿಕಾರಿಗಳೊಂದಿಗೆ ನಾಯ್ಕಗೆ ಸಂಬಂಧಿಸಿದ ಆಸ್ತಿ ಜಪ್ತಿ ವಿಷಯದಲ್ಲಿ ಮಾತುಕತೆ ನಡೆಸಿದ್ದಾರೆ.

ಆಸ್ತಿ ವಿಷಯಕ್ಕೆ ಸಂಬಂಧಿಸಿ ಎನ್‍ಐಎ, ನಾಯ್ಕ್ ಮತ್ತು ಆತನ ಇಸ್ಲಾಮಿಕ್ ರೀಸರ್ಚ್ ಫೌಂಡೇಶನ್ (ಐ ಆರ್ ಎಫ್) ಹೇಳಿಕೆ ದಾಖಲಿಸಿಕೊಂಡಿದೆ. ಯುಎಪಿ (ಕಾನೂನುಬಾಹಿರ ಚಟುವಟಿಕೆ ತಡೆ) ಕಾಯ್ದೆ ಉಲ್ಲಂಘಿಸಿ ವಿದೇಶಿ ದೇಣಿಗೆ ಸ್ವೀಕರಿಸುತ್ತಿರುವ ಈ ಫೌಂಡೇಶನಿಗೆ ಸರ್ಕಾರ ಐದು ವರ್ಷ ನಿಷೇಧ ಹೇರಿದೆ.

ನಾಯ್ಕ್ ಹಾಗೂ ಐ ಆರ್ ಎಫ್ ಪುಣೆ ಮತ್ತು ಸೋಲಾಪುರದಲ್ಲೂ ಆಸ್ತಿ ಹೊಂದಿದೆ. ಈ ಬಗ್ಗೆ ನಾಯ್ಕನ ವಕ್ತಾರ ತಕ್ಷಣ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾನೆ.

ಮುಸ್ಲಿಂ ಯುವಕರಲ್ಲಿ ಧಾರ್ಮಿಕ ಭಾವನೆ ಕೆರಳಿಸುವಂತೆ ಭಾಷಣ ಮಾಡಿ, ಕೋಮುದ್ವೇಷ ಸಾಧಿಸಲು ಉತ್ತೇಜನ ನೀಡಿದ್ದಾನೆಂಬ ಆರೋಪದಡಿ ಐ ಆರ್ ಎಫ್ ನಿಷೇಧದ ಬಳಿಕ ಐ ಆರ್ ಎಫ್ ಮತ್ತು ನಾಯ್ಕ್ ವಿರುದ್ಧ ಎನ್ ಐ ಎ ಪ್ರಕರಣ ದಾಖಲಿಸಿಕೊಂಡಿದೆ. ನಾಯ್ಕ್ ರಾಷ್ಟ್ರೀಯ ಭಾವನೆ ಕೆರಳಿಸುವಂತಹ ಭಾಷಣ ಮಾಡಿದ್ದಾನೆಂದು ಎನ್ ಐ ಎ ಆರೋಪಿಸಿದೆ.

“ನಾಯ್ಕ್ ಹಾಗೂ ಆತನ ಎ ಆರ್ ಎಫ್‍ಗೆ ಸೇರಿದ ಹಲವಾರು ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕುವಂತೆ ಸೂಚಿಸಲಾಗಿದೆ” ಎಂದು ಆ ಅಧಿಕಾರಿ ತಿಳಿಸಿದರು.