ಉಪ್ಪಿನಂಗಡಿ ಗ್ರಾಮ ಪಂಚಾಯತ್ ಕಟ್ಟಡ ಕಾಮಗಾರಿ ಪರಿಶೀಲಿಸಿದ ಜಿ ಪಂ ಸಿಒ

ಕಟ್ಟಡ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಸಿಒ ಎಂ ಆರ್ ರವಿ

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ನಿರ್ಮಾಣ ಹಂತದಲ್ಲಿರುವ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಕಟ್ಟಡಕ್ಕೆ ಭೇಟಿ ನೀಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ ಆರ್ ರವಿ ಕಾಮಗಾರಿ ಪರಿಶೀಲನೆ ನಡೆಸಿದರು.

ಈ ಸಂದರ್ಭ ನೂತನ ಕಟ್ಟಡದ ಬಗ್ಗೆ ಮಾಹಿತಿ ನೀಡಿದ ಪಂಚಾಯತ್ ಅಧ್ಯಕ್ಷ ಅಬ್ದುರಹ್ಮಾನ್, “1.80 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣಗೊಳ್ಳಲಿದ್ದು, ಇದರಲ್ಲಿ ಪಂಚಾಯತ್ ಕಚೇರಿ, ಕಂದಾಯ ಇಲಾಖೆಯ ಕಚೇರಿ, ಸಭಾಂಗಣ, ಸಂಸದರ, ಶಾಸಕರ ಕೊಠಡಿ ಸೇರಿದಂತೆ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರುಗಳಿಗೆ, ಸದಸ್ಯರುಗಳಿಗೆ ಪ್ರತ್ಯೇಕ ಕೊಠಡಿ ನಿರ್ಮಾಣಗೊಳ್ಳಲಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಎಲ್ಲಾ ಸರಕಾರಿ ಇಲಾಖೆಗಳನ್ನು ಈ ಕಟ್ಟಡದೊಳಗೆ ತಂದು ಇದನ್ನೊಂದು ಮಿನಿ ವಿಧಾನಸೌಧವಾಗಿ ಮಾಡಲಾಗುವುದು. ಇದಕ್ಕೆ ಈಗ ಪಂಚಾಯತಿನ ಸ್ವಂತ ಅನುದಾನ ಹಾಗೂ ಉದ್ಯೋಗಖಾತ್ರಿ ಯೋಜನೆಯಡಿ ಬಂದ ಅನುದಾನದಲ್ಲಿ ಕಾಮಗಾರಿ ನಡೆಸಲಾಗಿದ್ದು, ಸಂಸದರು, ಶಾಸಕರು ಅನುದಾನ ಒದಗಿಸಿವ ಭರವಸೆಯನ್ನೂ ನೀಡಿದ್ದಾರೆ” ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿ ಮಾತನಾಡಿ, “ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸುವ ಮೂಲಕ ಪಂಚಾಯತ್ ಆದಾಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಪಂಚಾಯತಿನ ಆದಾಯ ಉತ್ತಮವಾಗಿದ್ದಾಗ ಮಾತ್ರ ಗ್ರಾಮಾಭಿವೃದ್ಧಿ ನಡೆಸಲು ಸಾಧ್ಯವಾಗುತ್ತದೆ” ಎಂದರು.