ರೈ ಕ್ಷಮೆಯಾಚನೆಗೆ ಬಿಜೆಪಿ ಯುವಮೋರ್ಚಾ ಪಟ್ಟು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಬಂಧಿಸುವಂತೆ ದಕ್ಷಿಣ ಕನ್ನಡ ಎಸ್ಪಿ ಗುಲಾಬ್‍ರಾವ್ ಬೊರಸೆಗೆ ಸಚಿವರ ರೈ ನಿರ್ದೇಶನ ನೀಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ರೈ ಕ್ಷಮೆ ಯಾಚಿಸುವಂತೆ ಆಗ್ರಹಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಯುವಮೋರ್ಚಾದ ಜಿಲ್ಲಾಧ್ಯಕ್ಷ ಹರೀಶ್ ಪೂಂಜಾ, ರೈ ಕ್ಷಮೆ ಯಾಚನೆ ಮಾಡದೇ ಇದ್ದರೆ ಇನ್ನಷ್ಟು ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ತಮ್ಮ ಹೇಳಿಕೆಗಳ ಮೂಲಕ ಕಲ್ಕಡ್ಕ ಮತ್ತು ಕನ್ಯಾನದಲ್ಲಿ ಅಹಿತಕರ ಘಟನೆಗಳಿಗೆ ಕಾರಣರಾಗಿದ್ದಾರೆ ಎಂದರು.

ಮುಂಬರುವ ಚುನಾವಣೆ ಮೇಲೆ ಕಣ್ಣಿಟ್ಟಿರುವ ಸಚಿವ ರೈಗಳು ಮುಸ್ಲಿಮರ ಓಲೈಕೆ ಮಾಡಲು ಈ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ. ತನ್ನ ಕ್ಷೇತ್ರವನ್ನು ಕಳೆದುಕೊಳ್ಳುವ ಮತ್ತು ಅಲ್ಪಸಂಖ್ಯಾತರ ಓಟುಗಳನ್ನು ಕಳೆದುಕೊಳ್ಳುವ ಭೀತಿಯನ್ನು ಅವರು ಎದುರಿಸುತ್ತಿದ್ದಾರೆ. ಕಲ್ಲಡ್ಕದಲ್ಲಿ ನಡೆದ ಗಲಭೆಗಳಿಗೆ ಸಚಿವ ರೈಗಳೇ ಕುಮ್ಮಕ್ಕು ನೀಡಿದ್ದಾರೆ ಎನ್ನುವುದು ಸ್ಪಷ್ಟವಾಗಿದ್ದು, ಇದೆಲ್ಲವೂ ಅವರು ಚುನಾವಣೆಗೆ ಮಾಡುತ್ತಿರುವ ತಾಲೀಮುಗಳು ಎಂದರು.