ಮಹಿಳೆಗೆ ಚೂರಿ ತೋರಿಸಿದ ಯುವಕನಿಗೆ ಭರ್ಜರಿ ಏಟು

ನಮ್ಮ ಪ್ರತಿನಿಧಿ ವರದಿ

ಬೆಳ್ತಂಗಡಿ : ಕ್ಷುಲ್ಲಕ ವಿಚಾರದಲ್ಲಿ ಜಗಳ ಹುಟ್ಟಿಕೊಂಡ ಸಂದರ್ಭ ಲಾಯಿಲಾ ಗ್ರಾಮದ ಯುವಕನೋರ್ವ ಮಹಿಳೆಗೆ ಚೂರಿಯಿಂದ ಇರಿಯಲು ಯತ್ನಿಸಿ ಹೋಗಿ ಸಾರ್ವಜನಿಕರಿಂದ ಭರ್ಜರಿ ಗೂಸ ತಿಂದ ಘಟನೆ ಗುರುವಾಯನಕೆರೆಯಲ್ಲಿ ಬುಧವಾರ ನಡೆದಿದೆ.

ಲಾಯಿಲಾ ಗ್ರಾಮದ ನಿವಾಸಿ ಉಮೇಶ್ (39) ಎಂಬಾತನೇ ತಾನೆಸಗಿದ ಎಡವಟ್ಟಿನ ಪರಿಣಾಮ ಗುರುವಾಯನಕೆರೆ ಬಳಿ ಸಾರ್ವಜನಿಕರಿಂದ  ಏಟು ತಿಂದ ಯುವಕ.

ಉಮೇಶ್ ಮತ್ತು ಮಹಿಳೆ ನಡುವೆ ನಿಲ್ಲಿಸಿದ್ದ  ವಾಹನವನ್ನು ತೆಗೆಯುವ ವಿಚಾರದಲ್ಲಿ ಪರಸ್ಪರ ಮಾತಿನ ಚಕಮಕಿ ನಡೆದು ವಿಕೋಪಕ್ಕೆ ತಿರುಗಿದ್ದು ಮಹಿಳೆ ಒರಟಾಗಿ ಏನೋ ಅವಾಚ್ಯ ಮಾತನಾಡಿದಾಗ ಈತನಿಗೆ ಕೋಪ ಬಂದು ಚೂರಿ ತೋರಿಸಿ ಬೆದರಿಸಲು ಮುಂದಾಗಿ ಏಟು ತಿಂದಿದ್ದಾನೆ. ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಆತನ ಕೈಯಲ್ಲಿದ್ದ ಚೂರಿಯನ್ನು ವಶಕ್ಕೆ ಪಡೆದುಕೊಂಡು ಸಂಭಾವ್ಯ ಅನಾಹುತ ತಪ್ಪಿಸಿದ್ದಾರೆ. ಪೊಲೀಸರು ಬಂಧಿಸಿದ್ದಾರೆ.