ಶೌಚಾಲಯ ಪುನರಾರಂಭಕ್ಕೆ ಆಗ್ರಹಿಸಿ ಯುವಕರ ಸತ್ಯಾಗ್ರಹ

ನಮ್ಮ ಪ್ರತಿನಿಧಿ ವರದಿ

ಅಂಕೋಲಾ : ಪಟ್ಟಣದಲ್ಲಿ ಯಾವುದೇ ಸಾರ್ವಜನಿಕ ಶೌಚಾಲಯ ಇಲ್ಲದಿರುವುದರಿಂದ ಜನರು ಪರಿತಪಿಸುವಂತಾಗಿದ್ದು, ಕೂಡಲೇ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗುರುವಾರ ಜೇನುಗೂಡು ವಾಟ್ಸ್ಸಪ್ ಗ್ರೂಪ್ಪಿನವರು ತಹಶೀಲ್ದಾರ ಕಚೇರಿ ಹೊರಾಂಗಣದಲ್ಲಿ ಗುರುವಾರದಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದರು.

ವಾಟ್ಸಪ್ ಗ್ರೂಪ್ ಪ್ರಮುಖರಾದ ಸುಭಾಶ ಕಾರೇಬೈಲ್ ಮಾತನಾಡಿ, “ಬಸ್ ನಿಲ್ದಾಣ ಹೊರತುಪಡಿಸಿದರೆ ಉಳಿದ 5 ಶೌಚಾಲಯಗಳು ನಿರ್ವಹಣೆಯಿಲ್ಲದೆ ಕಳೆದ ಕೆಲವು ವರ್ಷಗಳಿಂದ ಮುಚ್ಚಿವೆ. ಇದರಿಂದಾಗಿ ವಿವಿಧ ಹಳ್ಳಿಗಳಿಂದ ಪಟ್ಟಣಕ್ಕೆ ಬರುವ ಸಾರ್ವಜನಿಕರು ಶೌಚಾಲಯವಿಲ್ಲದೆ ಕಷ್ಟ ಎದುರಿಸುತ್ತಿದ್ದಾರೆ. ಈ ಕುರಿತು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದರು.

ಅನಂತ ಕಟ್ಟಿಮನಿ ಮಾತನಾಡಿ, “ಪಟ್ಟಣದಲ್ಲಿ ಬಸ್ ನಿಲ್ದಾಣದ ಶೌಚಾಲಯ ಹೊರತುಪಡಿಸಿ ಪುರಸಭೆ ವ್ಯಾಪ್ತಿಗೆ ಒಳಪಡುವ ನಾಲ್ಕು ಶೌಚಾಲಯಗಳಿದ್ದು, ಸರಿಯಾದ ನಿರ್ವಹಣೆ ಇಲ್ಲದೇ ಸ್ಥಗಿತಗೊಂಡಿದೆ. ಮೊದಲು ಇದನ್ನು ದುರಸ್ತಿಪಡಿಸಿ ತಕ್ಷಣ ಸಾರ್ವಜನಿಕರ ಬಳಕೆಗೆ ನೀಡಬೇಕು” ಎಂದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ ವಿವೇಕ ಶೇಣ್ವಿ ಮಾತನಾಡಿ, “ನಿರ್ವಹಣೆಯಿಲ್ಲದೆ ಸ್ಥಗಿತಗೊಂಡಿದ್ದ ಶೌಚಾಲಯವನ್ನು ಶೀಘ್ರ ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಮುಕ್ತಗೊಳಿಸುವಂತೆ ಸೂಚಿಸಿದ್ದೇನೆ. ಹಾಗೇ ಪುರಸಭೆಯಿಂದ ಸಮರ್ಥ ಚಿತ್ರಮಂದಿರದ ಎದುರು ಶೌಚಾಲಯ ನಿರ್ಮಾಣಕ್ಕೆ 3 ಲಕ್ಷ ರೂ ಮಂಜೂರಿಯಾಗಿದ್ದು, ಈಗಲೇ ಸರ್ವೆ ನಡೆಸಿ ಪುರಸಭೆಯವರಿಗೆ ಸ್ಥಳವನ್ನು ಗುರುತಿಸಿಕೊಡುತ್ತೇನೆ” ಎಂದರು.