ಸ್ನೇಹಿತನನ್ನೇ ತಿವಿದು ಕೊಲೆಗೈದ ಗೆಳೆಯ

ಕೊಲೆಯಾದ ಸಂತೋಷ್

ಹೊಸ ವರ್ಷದ ಪಾರ್ಟಿಯಲ್ಲಿ ದುರಂತ

ನಮ್ಮ ಪ್ರತಿನಿಧಿ ವರದಿ
ಮಂಗಳೂರು : ಹೊಸ ವರ್ಷದ ಪಾರ್ಟಿಯಲ್ಲಿದ್ದ ಸ್ನೇಹಿತರಿಬ್ಬರು ಕಂಠಪೂರ್ತಿ ಕುಡಿದು ನಶೆ ಏರಿದಾಗ ಕೊನೆಗೆ ಮಾತಿಗೆ ಮಾತು ಬೆಳೆಸಿಕೊಂಡು ಒಬ್ಬ ಇನ್ನೊಬ್ಬನಿಗೆ ಚೂರಿಯಿಂದ ತಿವಿದು ಹತ್ಯೆ ಮಾಡುವ ಮೂಲಕ ಹೊಸವರ್ಷದ ಸಂಭ್ರಮ ಮೊದಲ ದಿನವೇ ದುಃಖಾಂತ್ಯವಾದ ಘಟನೆ ನಡೆದಿದೆ
ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ತಾರ್ ಜಂಕ್ಷನಿನಲ್ಲಿ ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಮೂಲತಃ ದಾವಣಗೆರೆ ಹರಳಹಳ್ಳಿ ನಿವಾಸಿ ರುದ್ರಮಣಿ ಸಂತೋಷ್ (26) ಎಂದು ಗುರುತಿಸಲಾಗಿದೆ  ಈತನ ಜೊತೆಗೇ ಸೆಲೂನಿನಲ್ಲಿ ಕೆಲಸ ಮಾಡಿಕೊಂಡಿದ್ದ ಶಿಕಾರಿಪುರದ ಸ್ನೇಹಿತ ಪ್ರದೀಪ್ ಚೂರಿಯಿಂದ ತಿವಿದು ಸ್ನೇಹಿತನನ್ನು ಕೊಲೆಮಾಡಿದ್ದಾನೆ
ಉಳ್ಳಾಲದ ಕುತ್ತಾರಿನಲ್ಲಿರುವ ಸಂಗಾತಿ ಕಾಂಪ್ಲೆಕ್ಸಿನಲ್ಲಿರುವ ರಮೇಶ್ ಎಂಬವರಿಗೆ ಸೇರಿದ ಸೆಲೂನ್ ಅಂಗಡಿಯಲ್ಲಿ ಇವರ ಸಂಬಂಧಿ ಸಂತೋಷ್ ಮತ್ತು ಪ್ರದೀಪ್ ಒಟ್ಟಾಗಿ ಕೆಲಸ ಮಾಡಿಕೊಂಡಿದ್ದರು. ಇವರಿಬ್ಬರೂ ಅತ್ಯಂತ ಅನ್ಯೋನ್ಯತೆ ಹೊಂದಿದ್ದು  ಹೊಸ ವರ್ಷದ ಸಂಭ್ರಮವನ್ನು ಜೊತೆಯಾಗಿಯೇ ಆಚರಿಸಲು ಸ್ನೇಹಿತರು ಮೊದಲೇ ಪೂರ್ವಸಿದ್ಧತೆಯನ್ನೂ ಮಾಡಿಕೊಂಡಿದ್ದರು  ಶನಿವಾರ ರಾತ್ರಿ ಕೆಲಸ ಮುಗಿಸಿದ ಬಳಿಕ ಇಬ್ಬರೂ ಜತೆಯಾಗಿಯೇ ಅಂಗಡಿ ಬಾಗಿಲು ಮುಚ್ಚಿದ್ದರು
ರಾತ್ರಿ ಹೊಸವರ್ಷದ ಪಾರ್ಟಿ ಮಾಡಲೆಂದು ಅಂಗಡಿ ಮೇಲಿರುವ ಬಾಡಿಗೆ ರೂಮಿಗೆ ಮದ್ಯವನ್ನೂ ತಂದಿಟ್ಟುಕೊಂಡಿದ್ದರು  ಈ ನಡುವೆ ಕಿಕ್ ಏರುತ್ತಿದ್ದಂತೆ ಪ್ರದೀಪ್ ಯಾವುದೇ ಹೆಂಗಸಿನ ಜೊತೆಗೇ ಅತ್ಯಂತ ಸಲುಗೆಯಿಂದ ಇರುವುದನ್ನು ಸಂತೋಷ್ ಆಕ್ಷೇಪಿಸಿದ ಎನ್ನಲಾಗಿದೆ.
ಇದರಿಂದ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಸಂತೋಷ  ಪ್ರದೀಪನ ತಾಯಿಗೆ ಬೈದಿದ್ದು  ತನ್ನ ತಾಯಿ ಬಗ್ಗೆ ಅಶ್ಲೀಲವಾಗಿ ನಿಂದಿಸಿರುವುದನ್ನು ಸಹಿಸದ ಪ್ರದೀಪ್ ಅಡುಗೆ ಕೋಣೆಯಲ್ಲಿದ್ದ ಚೂರಿ ತಂದು ಸಂತೋಷಗೆ ತಿವಿದಿದ್ದಾನೆ  ವಿಪರೀತ ರಕ್ತಸ್ರಾವ ಉಂಟಾಗಿ ಬೊಬ್ಬೆ ಹಾಕಿದಾಗ ಪ್ರದೀಪಗೆ ತನ್ನ ತಪ್ಪಿನ ಅರಿವಾಗಿದೆ  ಕೂಡಲೇ ಸೆಲೂನಿನ ಮಾಲಿಕ ರಮೇಶ್ ಮತ್ತು ಅಕ್ಕಪಕ್ಕದ ಮಂದಿಯ ಜೊತೆಗೆ ಸೇರಿಕೊಂಡು ಗಾಯಾಳು ಸಂತೋಷನನ್ನು ದೇರಳಕಟ್ಟೆ ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಆತ ಸಾವನ್ನಪ್ಪಿದ್ದಾನೆ  ಬಳಿಕ ಆರೋಪಿ ಪ್ರದೀಪ್ ಖುದ್ದಾಗಿ ಉಳ್ಳಾಲ ಪೊಲೀಸರಿಗೆ ಶರಣಾಗಿದ್ದಾನೆ
ಅತ್ಯಂತ ಬಡ ಕುಟುಂಬದಲ್ಲಿದ್ದ ಸಂತೋಷ್ ದಾವಣಗೆರೆಯಲ್ಲಿರುವ ತನ್ನ ಮನೆಗೆ ತಾನು ದುಡಿದು ಹಣವನ್ನೂ ಕಳುಹಿಸಿಕೊಡುತ್ತಿದ್ದ. ಅಲ್ಲದೆ ತನ್ನ ಸಹೋದರಿಯ ಮದುವೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದ  ಸಹೋದರಿ ಮದುವೆ ಫೆ 15ರಂದು ನಡೆಸಲು ನಿರ್ಧರಿಸಲಾಗಿತ್ತು. ಅಲ್ಲದೆ ಮಾರ್ಚ್ ತಿಂಗಳಿನಲ್ಲೂ ಸ್ವತಃ ಸಂತೋಷಗೆ ವಿವಾಹ ನಿಶ್ಚಯವಾಗಿದ್ದು  ಮನೆ ಮಂದಿ ಮದುವೆ ಸಂಭ್ರಮದ ತಯಾರಿ ನಡೆಸುತ್ತಿದ್ದರು
ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ