ಪಾಳುಬಾವಿಗೆ ಬಿದ್ದು ಅರೆಪ್ರಜ್ಞಾವಸ್ಥೆಯಲ್ಲಿದ್ದ ಯುವಕನ ರಕ್ಷಣೆ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ಪಾಳುಬಾವಿಯಲ್ಲಿ ಬಿದ್ದು ಅರೆಪ್ರಜ್ಞಾವಸ್ಥೆಯಲ್ಲಿದ್ದ ಯುವಕನನ್ನು ನಾಗರಿಕರು ಮೇಲಕ್ಕೆತ್ತಿ ಜೀವಾಪಾಯದಿಂದ ಪಾರುಮಾಡಿದ್ದಾರೆ.

ಉಪ್ಪಳಗೇಟ್ ಬಳಿಯಲ್ಲಿರುವ ಪಾಳು ಬಾವಿಯಲ್ಲಿ ಸುಮಾರು 30 ವರ್ಷದ ಅನ್ಯರಾಜ್ಯ ಕಾರ್ಮಿಕನಾದ ಯುವಕ ಪತ್ತೆಯಾಗಿದ್ದಾನೆ. ತ್ಯಾಜ್ಯ ತುಂಬಿಕೊಂಡಿರುವ ಬಾವಿಯಲ್ಲಿ ಬಿದ್ದಿದ್ದ ಇವರ ನರಳಾಟ ಕೇಳಿ ರೈಲುಹಳಿಯ ದುರಸ್ತಿ ಕೆಲಸ ನಡೆಸುತ್ತಿದ್ದ ಯುವಕರು ಸ್ಥಳಕ್ಕೆ ತೆರಳಿ ನೋಡಿದಾಗ ಯುವಕ ಕಂಡುಬಂದಿದ್ದಾರೆ. ಕೂಡಲೇ ಪರಿಸರ ನಿವಾಸಿಗಳಾದ ಯುವಕರು ತಲುಪಿ ಬಾವಿಯೊಳಗಿನಿಂದ ಮೇಲಕ್ಕೆತ್ತಿ ಉಪ್ಪಳದ ಖಾಸಗಿ ಆಸ್ಪತ್ರೆಗೂ ಬಳಿಕ ಕಾಸರಗೋಡಿನ ಜನರಲ್ ಆಸ್ಪತ್ರೆಗೆ ತಲುಪಿಸಿ ದಾಖಲಿಸಿದರು. ಬಾವಿಗೆ ಬಿದ್ದ ಯುವಕ ಅನ್ಯರಾಜ್ಯ ಕಾರ್ಮಿಕನೆಂದು ಖಚಿತಪಡಿಸಲಾಗಿದ್ದು, ಪ್ರಜ್ಞೆ ಮರುಕಳಿಸಿದ ಬಳಿಕ ಆತನ ಪೂರ್ಣ ಮಾಹಿತಿ ಹಾಗೂ ಬಾವಿಗೆ ಹೇಗೆ ಬಿದ್ದನೆಂಬುದನ್ನು ತಿಳಿಯಬಹುದಾಗಿದೆ. ಕಳೆದ ಮೂರು ದಿನಗಳಿಂದ ಈತ ಬಾವಿಯಲ್ಲಿದ್ದಿರಬಹುದೆಂದು ಸಂಶಯಿಸಲಾಗಿದೆ.

ಇದೇ ವೇಳೆ ನಾಗರಿಕರು ಯುವಕನನ್ನು ಬಾವಿಯಿಂದ ಮೇಲಕ್ಕೆತ್ತಿ ಉಪ್ಪಳದ ಆಸ್ಪತ್ರೆಗೆ ತಲುಪಿಸಿ ಬಳಿಕ ಕಾಸರಗೋಡಿನ ಆಸ್ಪತ್ರೆಗೆ ಕೊಂಡೊಯ್ಯಲು ಉಪ್ಪಳ ಕಂಟ್ರೋಲ್ ರೂಂ ಹಾಗೂ ಹೈವೇ ಪೆÇಲೀಸರ ಸಹಾಯ ಯಾಚಿಸಿದರೂ ಅವರು ಸಹಾಯವೊದಗಿಸಿಲ್ಲವೆಂಬ ಆರೋಪ ಕೇಳಿ ಬಂದಿದೆ. ಬಳಿಕ ನಾಗರಿಕರು ಹಣ ಸಂಗ್ರಹಿಸಿ ಅಂಬುಲೆನ್ಸಿನಲ್ಲಿ ಕಾಸರಗೋಡಿನ ಆಸ್ಪತ್ರೆಗೆ ಸಾಗಿಸಿದ್ದಾರೆ. ಯುವಕನನ್ನು ಬಾವಿಯಿಂದ ರಕ್ಷಿಸಿ ಪ್ರಾಣವುಳಿಸಿದ ಸ್ಥಳೀಯರನ್ನು ಸಾರ್ವಜನಿಕರು ಅಭಿನಂದಿಸಿದ್ದಾರೆ.