ಕೌಶಲ್ಯಾಭಿವೃದ್ಧಿ ಆಕಾಂಕ್ಷಿ ಯುವಕರಿಂದ ನೋಂದಣಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ಉರ್ವಾ ಸ್ಟೋರಿನ ಜಿಲ್ಲಾ ಪಂಚಾಯತ ಕಟ್ಟಡದ ನೇತ್ರಾವತಿ ಸಭಾಂಗಣದಲ್ಲಿ ಬುಧವಾರ ನಡೆದ ಒಂದು ದಿನದ ಕೌಶಲ್ಯಾಭಿವೃದ್ದಿ ತರಬೇತಿ ಮತ್ತು ಮಾಹಿತಿ ಪೂರೈಕೆ ಕಾರ್ಯಕ್ರಮದಲ್ಲಿ ಭಾರೀ ಸಂಖ್ಯೆಯ ಉದ್ಯೋಗಾಕಾಂಕ್ಷಿ ಯುವಜನರು ಹೆಸರು ನೋಂದಾಯಿಸಿದ್ದಾರೆ. ಅವರಲ್ಲಿ ಕೆಲವರು ಶಾಂತಿಯುತ ಜೀವನ ನಿರ್ವಹಣೆಗಾಗಿ ಅಗತ್ಯವಾದ ಆದಾಯ ಗಳಿಕೆಗೆ ಬೇಕಾದ ಉದ್ಯೋಗಾಧಾರಿತ ತರಬೇತಿಯ ಬಗ್ಗೆ ವಿಚಾರಿಸುತ್ತಿದ್ದುದು ಕಂಡುಬಂದಿತ್ತು.

ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ ದೀನದಯಾಳ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನ ಉತ್ತೇಜನ ಸೊಸೈಟಿ ಮತ್ತು ರಾಜೀವ್ ಗಾಂಧಿ ಚೈತನ್ಯ ಯೋಜನೆ ಸಹಭಾಗಿತ್ವದಲ್ಲಿ ಆಯೋಜಿಸಿತ್ತು.

ಒಂದು ದಿನದ ಕೌಶಲ್ಯಾಭಿವೃದ್ದಿ ಮತ್ತು ತರಬೇತಿ ಯೋಜನೆಯಲ್ಲಿ ಉಜಿರೆ ಗ್ರಾಮೀಣ ಅಭಿವೃದ್ಧಿ ಮತ್ತು ಸ್ವ ಉದ್ಯೋಗ ತರಬೇತಿ ಸಂಸ್ಥೆ, ಮಲಂಕರ ಸಮಾಜ ಸೇವಾ ಕೇಂದ್ರ, ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ, ಕರ್ನಾಟಕ ಜರ್ಮನ್ ಟೆಕ್ನಿಕಲ್ ಸೆಂಟರ್ ಮತ್ತು ಇತರ ಸಂಸ್ಥೆಗಳು ಪ್ರತಿನಿಧಿಸಿದ್ದವು. ಕಾರ್ಯಕ್ರಮದಲ್ಲಿ ಉದ್ಯೋಗ ಆಧಾರಿತ ಕೋರ್ಸುಗಳು ಮತ್ತು ಸರ್ಕಾರಿ ಸ್ವ-ಉದ್ಯೋಗ ಯೋಜನೆಗಳ ಬಗ್ಗೆ ಮಾಹಿತಿ ಒದಗಿಸಲಾಗಿದೆ.