ಬಾರ್ ಎದುರು ಯುವಕ ಕೊಲೆ : ಇಬ್ಬರ ಬಂಧನ

ಕೊಲೆಯಾದ ಅಣ್ಣು

ನಮ್ಮ ಪ್ರತಿನಿಧಿ ವರದಿ

ಬೆಳ್ತಂಗಡಿ : ಯುವಕನೊಬ್ಬನನ್ನು ಬಾರ್ ಮುಂದೆ ಇಬ್ಬರು ಪರಿಚಿತ ಯುವಕರು ಸೇರಿಕೊಂಡು ಬರ್ಬರವಾಗಿ ಇರಿದು ಹತ್ಯೆಗೈದ ಘಟನೆ ಬುಧವಾರ ರಾತ್ರಿ ನಡೆದಿದ್ದು, ಎರಡು ಕುಟುಂಬಗಳ ನಡುವಿನ ಜಾಗದ ತಕರಾರಿಗೆ ಸಂಬಂಧಿಸಿದ ದ್ವೇಷವೇ ಕೊಲೆಗೆ ಕಾರಣವೆಂದು ಮೇಲ್ನೋಟಕ್ಕೆ ತಿಳಿದುಬಂದಿದೆ.

 ಆರೋಪಿ ಗಿರೀಶ್ ಮತ್ತು ವೆಂಕಟೇಶ್
ಆರೋಪಿ ಗಿರೀಶ್ ಮತ್ತು ವೆಂಕಟೇಶ್

ಉಜಿರೆ ನಿವಾಸಿ ಅಣ್ಣು ಕೊಲೆಯಾದವರು. ಮೃತ ಅಣ್ಣು ಮದ್ಯಪಾನ ಮತ್ತಿತರ ದುಶ್ಚಟ ಹೊಂದಿರಲಿಲ್ಲ, ಈತ ಮದುವೆಯಾಗಿ ನಾಲ್ಕು ತಿಂಗಳ ಮಗುವಿನ ತಂದೆಯಾಗಿದ್ದರು. ಪಕ್ಕದ ಮನೆಯ ನಿವಾಸಿಗಳಾದ ಗಿರೀಶ್ ಮತ್ತು ವೆಂಕಟೇಶ್ ಕೊಲೆಗೈದ ಯುವಕರು. ಉಜಿರೆಯ ಮುಖ್ಯ ರಸ್ತೆಯ ಎಸ್ ಆರ್ ಬಾರ್ ಎದುರು ಬಂದು ಬೈಕ್ ನಿಲ್ಲಿಸಿ ಇಳಿಯುವಷ್ಟರಲ್ಲಿ ಗಿರೀಶ್ ಹಾಗೂ ವೆಂಕಟೇಶ್ ದಿಢೀರ್ ಸುತ್ತುವರಿದು ಅಣ್ಣುಗೆ ಚೂರಿಯಿಂದ ಹೊಟ್ಟೆ ಭಾಗಕ್ಕೆ ಇರಿದ ಪರಿಣಾಮ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಉಜಿರೆಯ ಎಸ್ ಆರ್ ಬಾರ್ ಬಳಿಯ ಗೂಡಂಗಡಿಯ ಮುಂದೆ ಬೈಕಿನಲ್ಲಿ ಬಂದ ಅಣ್ಣು ತನ್ನ ಮಗುವಿಗೆ ಚಾಕಲೇಟು ಖರೀದಿಸುವಾಗ ಪಕ್ಕದ ಮನೆಯ ನಿವಾಸಿ ಗಿರೀಶ್ ಮತ್ತು ವೆಂಕಟೇಶ್ ಎಂಬವರು ಸುತ್ತುವರಿದು ಇಬ್ಬರೂ ಚೂರಿಯಿಂದ ಹೊಟ್ಟೆ ಹಾಗೂ ಎದೆಗೆ ಬರ್ಬರವಾಗಿ ಇರಿದು ಪರಾರಿಯಾಗಿದ್ದಾರೆ. ಇರಿತದಿಂದ ಗಂಭೀರ ಗಾಯಗೊಂಡು ಜೀವನ್ಮರಣ ಹೋರಾಟದಲ್ಲಿದ್ದ ಅಣ್ಣು ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ.

ಕೊಲೆಯಾದ ಅಣ್ಣು ಹಾಗೂ ಆರೋಪಿಗಳಾದ ಗಿರೀಶ್ ಮತ್ತು ವೆಂಕಟೇಶ್ ಅವರು ಸಮೀಪದಲ್ಲಿಯೇ ವಾಸಿಸುತ್ತಿದ್ದರು. ಎರಡೂ ಕುಟುಂಬಗಳ ಮಧ್ಯೆ ಕೆಲವು ವರ್ಷಗಳಿಂದ ಜಾಗದ ತಕರಾರಿದ್ದು, ತಾವು ಅಪೇಕ್ಷಿಸಿದ ಭೂಮಿಗಾಗಿ ಹೋರಾಡುತ್ತಿದ್ದ ಅಣ್ಣು ಇದೇ ಕಾರಣಕ್ಕಾಗಿ ಕೊಲೆಯಾಗಿದ್ದಾರೆ ಎನ್ನಲಾಗಿದೆ. ಎರಡೂ ಕುಟುಂಬಗಳ ಮಧ್ಯೆ ಪರಸ್ಪರ ಜಾಗದ ತಕರಾರಿದ್ದು, ಜಾಗದ ಸ್ವಾಧೀನಕ್ಕಾಗಿ ಹೋರಾಡುತ್ತಿದ್ದರೂ ಕೊಲೆಯ ಹಂತಕ್ಕೆ ತಲುಪುವಷ್ಟು ದ್ವೇಷ ಹೊಂದಿದ್ದರೆಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿರಲಿಲ್ಲ ಎನ್ನಲಾಗಿದೆ.

ಉಜಿರೆ ಪೇಟೆ ಸಮೀಪ ಚಾರ್ಮಾಡಿ ರಸ್ತೆಗೆ ತಾಗಿಕೊಂಡು ಸುಮಾರು ಹತ್ತು ದಲಿತ ಕುಟುಂಬಗಳಿಗೆ ಹತ್ತು ಎಕ್ರೆಯಷ್ಟು ಜಮೀನು ಮಂಜೂರಾಗಿತ್ತು. ಮಂಜೂರಾಗಿರುವ ಜಮೀನು ಯಾರಿಗೆ ಸೇರಿದ್ದು ಎಂಬುದರ ಬಗ್ಗೆ ಸರಿಯಾಗಿ ಗಡಿ ಗುರುತಿಸುವ ಕಾರ್ಯ ನಡೆದಿರಲಿಲ್ಲ. ಇದೇ ವಿಚಾರ ಎರಡೂ ಕುಟುಂಬಗಳ ನಡುವೆ ಗೊಂದಲ, ಸಂಶಯ, ಅಪನಂಬಿಕೆಗೆ ಕಾರಣವಾಗಿ ಆಗಾಗ ಗಲಾಟೆಗಳು ನಡೆಯುತ್ತಿತ್ತು. ಹೆದ್ದಾರಿ ಬದಿಯಲ್ಲಿದ್ದು ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಜಮೀನು ಇದಾಗಿದ್ದು, ಇನ್ನೊಂದೆಡೆ ಸ್ಥಳೀಯ  ಖಾಸಗಿ ವ್ಯಕ್ತಿಗಳು ಇದೇ ಜಾಗದಲ್ಲಿ ಹತ್ತು ಸೆಂಟ್ಸ್ ಜಾಗವನ್ನು ಲೀಸ್ ನೆಪದಲ್ಲಿ ಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳೀಯ ಎರಡ್ಮೂರು ದಲಿತ ಕುಟುಂಬಗಳ ಮಧ್ಯೆ ವಿವಾದ ಸೃಷ್ಟಿಯಾಗಿತ್ತು. ಈ ಪೈಕಿ  ಇಂದು ಭೂವಿವಾದವು ನ್ಯಾಯಾಲಯದ ಮೆಟ್ಟಲೇರಿದ್ದು ಒಂದು ಕುಟುಂಬ ನ್ಯಾಯಾಲಯದಿಂದ ತಡೆ  ಪಡೆದುಕೊಂಡಿದ್ದು, ಕಳೆದ ಕೆಲ ವರ್ಷಗಳಿಂದ ಜಾಗದ ತಕರಾರು ಸಂಬಂಧಿಕರನ್ನೇ ಪರಸ್ಪರ ಶತ್ರುಗಳನ್ನಾಗಿಸಿ ಇದೀಗ ಕೊಲೆಯ ಹಂತಕ್ಕೆ ತಲುಪಿದೆ.

ಘಟನಾ ಸ್ಥಳಕ್ಕೆ ಪೊಲೀಸ್ ವರಿಷ್ಠರು ಭೇಟಿ ನೀಡಿದ್ದು, ತನಿಖೆಗೆ ಬೆಳ್ತಂಗಡಿ ಪೊಲೀಸರಿಗೆ ಮಾರ್ಗದರ್ಶನ ನೀಡಿದ್ದಾರೆ. ಶವವನ್ನು ಮಂಗಳೂರಿಗೆ ಪರೀಕ್ಷೆಗೆ ಕಳುಹಿಸಲಾಗಿದೆ. ಕೊಲೆಯಾದ ಯಾವುದೇ ದುರಭ್ಯಾಸ ಬೆಳೆಸಿಕೊಂಡಿರಲಿಲ್ಲ ಎನ್ನಲಾಗಿದೆ. ಆದರೆ ಬಾರ್ ಸಮೀಪದ ಗೂಡಂಗಡಿಗೆ ಬಂದು ಬಲಿಯಾಗಿರುವುದು ವಿಶೇಷ. ಅಣ್ಣುಗೆ ನಾಲ್ಕು ತಿಂಗಳ ಮಗುವಿದೆ.

ಕೊಲೆ ನಡೆದು 3 ಗಂಟೆ ಒಳಗೆ ಬೆಳ್ತಂಗಡಿ ಪೊಲೀಸರು ಆರೋಪಿಗಳಾದ ಗಿರೀಶ್ ಮತ್ತು ವೆಂಕಟೇಶ್ ಎಂಬವರನ್ನು ಉಜಿರೆ ದೇವಸ್ಥಾನದ ರಥ ಬೀದಿಯಲ್ಲಿ ಬಂಧಿಸಿಗಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.