ಮಂಗಳೂರಿಂದ ಕಾಣೆಯಾದ ಯುವಕನ ಶವ ಉಚ್ಚಿಲದಲ್ಲಿ ಪತ್ತೆ

ಉಚ್ಚಿಲ ಕಡಲತೀರದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾದ ಯುವಕನ ಶವ

ಆತ್ಮಹತ್ಯೆಯೋ…  ಕೊಲೆಯೋ…?

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಮಂಗಳೂರಿನಿಂದ ನಾಪತ್ತೆಯಾದ ಯುವಕನ ಶವ ಪಡುಬಿದ್ರಿ ಸಮೀಪದ ಉಚ್ಚಿಲ ಕಡಲ ಕಿನಾರೆಯಲ್ಲಿ ಸೋಮವಾರ ಮುಂಜಾನೆ ಪತ್ತೆಯಾಗಿದ್ದು, ಇದು ಆತ್ಮಹತ್ಯೆಯೋ, ಕೊಲೆಯೋ ಎಂಬ ಶಂಕೆ ಸಾರ್ವಜನಿಕರನ್ನು ಕಾಡುತ್ತಿದ್ದು, ಪೊಲೀಸರ ದಕ್ಷ ತನಿಖೆಯಿಂದಷ್ಟೇ ಸತ್ಯ ವಿಚಾರ ಬಯಲಿಗೆ ಬರಲಿದೆ.

ಮೃತ ಯುವಕ ಮೂಲತಃ ಹಾಸನ ಜಿಲ್ಲೆಯವರಾಗಿದ್ದು, ಕಳೆದ ಐದು ವರ್ಷಗಳಿಂದ ಮಂಗಳೂರಿನ ಚಿಕ್ಕಮ್ಮನ ಮನೆಯಲ್ಲಿ ವಾಸವಾಗಿದ್ದ ರಾಜೇಶ್ (21) ಈತ ಹಾಸನದಿಂದ ಬಂದು ಇಲ್ಲೇ ವಿದ್ಯಾಭ್ಯಾಸ ಮುಂದುವರಿಸಿ ಇದೀಗ ಕಂಪ್ಯೂಟರ್ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ. ಕಳೆದ 16ನೇ ತಾರೀಕಿನಂದು ಕಂಪ್ಯೂಟರ್ ಅಂಗಡಿಗೆ ಕೆಲಸಕ್ಕೆ ಹೋಗಿ ಬರುವುದಾಗಿ ಚಿಕ್ಕಮ್ಮನಲ್ಲಿ ಹೇಳಿ ಹೋಗಿದ್ದ ಯುವಕ ನಾಪತ್ತೆಯಾಗಿದ್ದ. ಈ ಬಗ್ಗೆ ಮಂಗಳೂರಿನ ಉರ್ವ ಪೊಲೀಸ್ ಠಾಣೆಗೆ ಮೃತನ ಚಿಕ್ಕಮ್ಮ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರಿಗೆ ಮಂಗಳೂರಿನ ನದಿ ದಡವೊಂದರಲ್ಲಿ ರಾಜೇಶನ ದ್ವಿಚಕ್ರವಾಹನ ಪಲ್ಸರ್ ಬೈಕ್ ಪತ್ತೆಯಾಗಿತ್ತು.

ಸೋಮವಾರ ಮುಂಜಾನೆ ಉಚ್ಚಿಲದ ಕಡಲಿಗೆ ಮೀನುಗಾರಿಕೆ ನಡೆಸಲು ಹೋಗಿದ್ದ ಸ್ಥಳೀಯರ ಕಣ್ಣಿಗೆ ಗಂಡಸಿನ ಶವ ಕಂಡುಬಂದಿದ್ದು, ತಕ್ಷಣ ಪಡುಬಿದ್ರಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದರಿಂದ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಸುತ್ತಲ ಠಾಣೆಗಳಿಗೆ ಮಾಹಿತಿ ನೀಡಿದಾಗ ನಾಪತ್ತೆಯಾದ ರಾಜೇಶ್ ಬಗ್ಗೆ ತಿಳಿದು ಬಂದಿದ್ದು, ಆ ಬಳಿಕ ಸ್ಥಳಕ್ಕೆ ಬಂದ ಮನೆಮಂದಿ ಶವದ ಗುರುತು ಪತ್ತೆ ಮಾಡಿದ್ದಾರೆ. ಬಹಳಷ್ಟು ದಿನಗಳ ಕಾಲ ನೀರಲ್ಲೇ ಇದ್ದ ಕಾರಣ ಶವ ಕೊಳೆಯುವ ಹಂತ ತಲುಪಿದ್ದು, ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.