ಗಲಭೆಯಲ್ಲಿ ಯುವಕ ನಾಪತ್ತೆ : ಪತ್ತೆ ಹಚ್ಚಲು ಆಗ್ರಹ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಹೊನ್ನಾವರ : ಪಟ್ಟಣದಲ್ಲಿ ನಡೆದ ಗಲಭೆಯಲ್ಲಿ ಬಂಧಿತರಾದ ಅಮಾಯಕರನ್ನು ಬಿಡುಗಡೆಗೊಳಿಸಬೇಕು ಮತ್ತು ನಾಪತ್ತೆಯಾದ ಒಬ್ಬ ಯುವಕನ್ನು ಪತ್ತೆ ಹಚ್ಚಬೇಕು ಎಂದು ಹಿಂದೂಪರ ಸಂಘಟನೆಯ ಪ್ರಮುಖರು ಮತ್ತು ಸಾರ್ವಜನಿಕರು ಆಗ್ರಹಿಸಿದರು.
ಪಟ್ಟಣದ ದುರ್ಗಾಕೇರಿಯ ಪ್ರೌಢಶಾಲಾ ಮೈದಾನದಲ್ಲಿ ಗುರುವಾರ ಬೆಳಿಗ್ಗೆ ಸಾವಿರಾರು ಜನರು ಜಮಾವಣೆಗೊಂಡು ಪ್ರತಿಭಟನೆ ನಡೆಸಿದ್ದರು. ಸ್ಥಳಕ್ಕೆ ತಹಶೀಲ್ದಾರ ವಿ ಆರ್ ಗೌಡ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಸಾರ್ವಜನಿಕರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಸಭೆಯಲ್ಲಿದ್ದ ಸಾರ್ವಜನಿಕರು ಪ್ರಮುಖ ಅಂಶಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಬುಧವಾರ ರಾತ್ರಿ ಬೈಕಿನಲ್ಲಿ ಹೋದ ಪಟ್ಟಣದ ತುಳಸೀನಗರದ ಯುವಕ ಪರೇಶ್ ಮೇಸ್ತ ಎಂಬಾತ ನಾಪತ್ತೆಯಾಗಿದ್ದಾನೆ. ಆತನನ್ನು ಅಪಹರಿಸಿರಬಹುದು ಎಂಬ ಆತಂಕವುಂಟಾಗಿದೆ. ಈತನನ್ನು ತಕ್ಷಣ ಪತ್ತೆ ಹಚ್ಚಬೇಕು. ತಡರಾತ್ರಿ ತಮ್ಮ ಮನೆಯಲ್ಲಿ ಮಲಗಿದವರನ್ನು ಪೊಲೀಸರು ಎಬ್ಬಿಸಿ ಬಂಧಿಸಿದ್ದಾರೆ. ಕೆಲವು ಮನೆಗಳ ಬಾಗಿಲುಗಳನ್ನು ಮುರಿದಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ. ಬಂಧನದಲ್ಲಿದ್ದ ಎಲ್ಲಾ ಅಮಾಯಕ ಹಿಂದೂಗಳನ್ನು ತಕ್ಷಣ ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.
ತಹಶೀಲ್ದಾರ ವಿ ಆರ್ ಗೌಡ ಇದಕ್ಕೆ ಪ್ರತಿಕ್ರಿಯಿಸಿ, “ಪಹಣಿ ಪತ್ರಿಕೆಯ ಗಣಕೀಕರಣದ ವೇಳೆ ತಪ್ಪಾಗಿ ನಮೂದಾಗಿದ್ದು, ಅದನ್ನು ಸರಿಪಡಿಸಲಾಗುವುದು ಮತ್ತು ಕಾನೂನಿನಂತೆ ಬಂಧಿತರನ್ನು ಬಿಡುಗಡೆಗೊಳಿಸಲಾಗುತ್ತದೆ” ಎಂದರು. ಇದಕ್ಕೆ ಒಪ್ಪದ ಸಾರ್ವಜನಿಕರು, “ಇಂದು ಸಂಜೆಯೊಳಗೆ ಬಿಡುಗಡೆಗೊಳಿಸಬೇಕು, ಇಲ್ಲವಾದಲ್ಲಿ ಹೋರಾಟ ನಡೆಸಲಾಗುವುದು” ಎಂದು ಎಚ್ಚರಿಸಿದರು.