ಯೂತ್ ಲೀಗ್ ವತಿಯಿಂದ ಪೊಲೀಸ್ ಠಾಣೆಗೆ ಪ್ರತಿಭಟನಾ ಮೆರವಣಿಗೆ, ಧರಣಿ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : “ಮಂಜೇಶ್ವರ ಪೊಲೀಸರು ನಿರಪರಾಧಿಗಳನ್ನು ಬಂಧಿಸಿ ಕೇಸು ದಾಖಲಿಸುತಿದ್ದಾರೆ. ಅದರಲ್ಲೂ ಮುಸ್ಲಿಂ ಯೂತ್ ಲೀಗ್ ಕಾರ್ಯಕರ್ತರ ವಿರುದ್ದ ಕ್ಷುಲ್ಲಕ ಕಾರಣಕ್ಕೂ ಜಾಮೀನುರಹಿತ ಕೇಸನ್ನು ದಾಖಲಿಸುತಿದ್ದಾರೆ” ಎಂಬ ಆರೋಪ ಮುಂದಿರಿಸಿಕೊಂಡು ಮಂಜೇಶ್ವರ ಮಂಡಲ ಮುಸ್ಲಿಂ ಯೂತ್ ಲೀಗ್ ವತಿಯಿಂದ ಮಂಜೇಶ್ವರ ಪೊಲೀಸ್ ಠಾಣೆಗೆ ಶುಕ್ರವಾರ ಬೆಳಿಗ್ಗೆ ಪ್ರತಿಭಟನಾ ಮೆರವಣಿಗೆ ಹಾಗೂ ಧರಣಿಯನ್ನು ಹಮ್ಮಿಕೊಳ್ಳಲಾಯಿತು.

ಮಂಜೇಶ್ವರ ರಿಜಿಸ್ಟ್ರಾರ್ ಕಚೇರಿ ಪರಿಸರದಿಂದ ಆರಂಭಗೊಂಡ ಧರಣಿ ಠಾಣಾ ಮುಂಬಾಗದಲ್ಲಿ ಪೊಲೀಸರು ತಡೆದರು. ಪೊಲೀಸರ ವಿರುದ್ದ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು.

ಮಂಜೇಶ್ವರ ಠಾಣಾಧಿಕಾರಿ ಸಿಪಿಎಂ ನೇತಾರರ ಆಜ್ಞಾಧಾರಕನಂತೆ ವರ್ತಿಸುತ್ತಿರುವುದಾಗಿ ಪ್ರತಿಭಟನಾ ನಿರತರು ಆರೋಪಿಸಿದರು. ನಡೆದ ಧರಣಿಯನ್ನು ಯೂತ್ ಲೀಗ್ ಜಿಲ್ಲಾಧ್ಯಕ್ಷ ಅಶ್ರಫ್ ಎಡನೀರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಪೊಲೀಸರ ಏಕಾಧಿಪತ್ಯ ನೀತಿಯನ್ನು ಕೊನೆಗಾಣಿಸದೇ ಇದ್ದರೆ ಮುಂದಿನ ತಿಂಗಳಿನಲ್ಲಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಗೆ ರೂಪು ನೀಡಲಾಗುವುದಾಗಿ ಎಚ್ಚರಿಸಿದರು.