ಯುವತಿಯ ಕೊಂದು ತಾನೂ ನೇಣಿಗೇರಿದ ಯುವಕ

ತೋಟದ ಮಧ್ಯೆ ಪತ್ತೆಯಾದ ಯುವತಿಯ ಶವ

ಪ್ರೀತಿ ನಿರಾಕರಿಸಿದ್ದೇ ಹತ್ಯೆಗೆ ಕಾರಣ ?

ನಮ್ಮ ಪ್ರತಿನಿಧಿ ವರದಿ

ಬಂಟ್ವಾಳ : ಎರಡು-ಮೂರು ವರ್ಷಗಳಿಂದ ಪ್ರೀತಿಸಿದ್ದ ಯುವತಿ ಕೊನೆಗೆ ಪ್ರೀತಿಗೆ ನಿರಾಕರಿಸುತ್ತಿರುವುದನ್ನು ಸಹಿಸದ ಯುವಕ ಪ್ರೇಯಸಿಯನ್ನು ಮಾರಕಾಯುಧದಿಂದ ಇರಿದು ಕೊಂದು ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ ಕೊಯ್ಲ ಗ್ರಾಮದ ಪಾಂಡವಗುಡ್ಡೆ ಎಂಬಲ್ಲಿ ಮಂಗಳವಾರ ನಡೆದಿದೆ.

ಪ್ರಿಯಕರನಿಂದ ಹತ್ಯೆಗೀಡಾದ ಯುವತಿಯನ್ನು ಬಿ ಕಸ್ಬಾ ಗ್ರಾಮದ, ಕುದನೆಗುಡ್ಡೆ ನಿವಾಸಿ ದಿವ್ಯಾ (23) ಹಾಗೂ ಪ್ರೇಯಸಿಯನ್ನು ಕೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಕೊಯ್ಲ ಗ್ರಾಮದ ಕುಡಮಾಣಿ ನಿವಾಸಿ ಮೋಹನ ಪೂಜಾರಿ ಎಂಬವರ ಪುತ್ರ ಸುಜಿತ್ (28) ಎಂದು ಹೆಸರಿಸಲಾಗಿದೆ.

ಮಂಗಳೂರಿನಲ್ಲಿ ಸೆಂಟ್ರಿಂಗ್ ಕೆಲಸ ನಿರ್ವಹಿಸುತ್ತಿದ್ದ ಸುಜಿತ್ ಹಾಗೂ ಮಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ದಿವ್ಯಾ ಕಳೆದ ಎರಡು-ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ ಇತ್ತೀಚೆಗೆ ಯಾವುದೋ ಕಾರಣಕ್ಕೆ ಪ್ರೀತಿಗೆ ನಿರಾಕರಿಸಿದ ಯುವತಿ ಮದುವೆಗೆ ಒಪ್ಪಿರಲಿಲ್ಲ ಎಂಬುದೇ ಕೃತ್ಯ ಎಸಗಲು ಕಾರಣ ಎಂದು ಪೊಲೀಸರು ಪ್ರಾಥಮಿಕ ತನಿಖೆಯಿಂದ ಕಂಡುಕೊಂಡಿದ್ದಾರಾದರೂ ಕೃತ್ಯಕ್ಕೆ ನೈಜ ಕಾರಣ ತನಿಖೆಯಿಂದಷ್ಟೆ ತಿಳಿದುಬರಬೇಕಿದೆ.

ಸೋಮವಾರ ಬೆಳಿಗ್ಗೆಯಿಂದಲೇ ಯುವಕ ಸುಜಿತ್ ಕಾಣೆಯಾಗಿದ್ದ. ಇದೇ ವೇಳೆ ಯುವತಿ ದಿವ್ಯಾ ಕೂಡಾ ಕಾಣೆಯಾಗಿದ್ದಳು. ಅಲ್ಲದೆ ಯುವಕ ತನ್ನ ಸ್ನೇಹಿತರೊಂದಿಗೆ ಗೆಳತಿಯ ಪ್ರೇಮ ವಿಚಾರ ಹಾಗೂ ಪ್ರೀತಿಯ ನಕಾರದ ವಿಚಾರಗಳ ಬಗ್ಗೆ ಹೇಳಿಕೊಂಡಿದ್ದ ಎನ್ನಲಾಗಿದ್ದು, ನಾವಿಬ್ಬರು ಸತ್ತರೆ ಒಟ್ಟೊಟ್ಟಿಗೆ ಸಮಾಧಿ ಮಾಡುವಂತೆಯೂ ಸಂದೇಶ ಕಳುಹಿಸಿದ್ದ ಎನ್ನಲಾಗಿದೆ. ಈ ಎಲ್ಲಾ ಸಂಶಯಗಳಿಂದ ಸಹಜವಾಗಿಯೇ ಸಂಜೆಯಾದರೂ ಇಬ್ಬರನ್ನೂ ಕಾಣದಾದಾಗ ಸ್ಥಳೀಯರು ಹುಡುಕಾಡಿದ್ದಾರೆ. ಸಮೀಪದ ಗೇರು ತೋಟದ ಸಮೀಪ ಬೈಕ್ ಕಂಡು ತೋಟದೊಳಗೆ ಹುಡುಕಾಡಿದಾಗ ಮಾರಕಾಯುಧದಿಂದ ಇರಿದ ಗಾಯಗಳೊಂದಿಗೆ ಯುವತಿ ದಿವ್ಯಾ ಹೆಣವಾಗಿ ಬಿದ್ದಿರುವುದು ಕಂಡು ಬಂದಿದೆಯಲ್ಲದೆ ಸಮೀಪದಲ್ಲೇ ಹರಿತವಾದ ಕತ್ತಿಯೂ ಪತ್ತೆಯಾಗಿದೆ. ಅನತಿ ದೂರದಲ್ಲೇ ಯುವಕ ಸುಜಿತ್ ಕೂಡಾ ಗೇರು ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಎರಡೂ ಶವಗಳು ಒಂದೇ ಜಾಗದಲ್ಲಿ ಸ್ಥಳೀಯರಿಗೆ ಪತ್ತೆಯಾಗಿದೆ. ಘಟನಾ ಸ್ಥಳದಲ್ಲಿ ಬ್ಯಾಗ್, ಎರಡು ಮೊಬೈಲ್, ಕತ್ತಿ, ಚಪ್ಪಲಿ ಮೊದಲಾದ ಸಾಮಗ್ರಿಗಳೂ ಪತ್ತೆಯಾಗಿದೆ. ಬಳಿಕ ಪೊಲೀಸರಿಗೆ ಮಾಹಿತಿ ರವಾನಿಸಲಾಗಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಎಸ್ಪಿ ಭೂಷಣ್ ಜಿ ಬೊರಸೆ, ಬಂಟ್ವಾಳ ಡಿವೈಎಸ್ಪಿ ರವೀಶ್, ವೃತ್ತ ನಿರೀಕ್ಷಕ ಬಿ ಕೆ ಮಂಜಯ್ಯ, ಗ್ರಾಮಾಂತರ ಠಾಣಾಧಿಕಾರಿ ರಕ್ಷಿತ್ ಎ ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಬಂಟ್ವಾಳ ಗ್ರಾಮಾಂತರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.