ಯುವಕನ ಹತ್ಯೆಗೈದು ತೋಡಿಗೆ ಎಸೆದರು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆಗೈದ ದುಷ್ಕರ್ಮಿಗಳು ಆತನ ಶವವನ್ನು ತೋಡಿಗೆ ಎಸೆದು ಹೋದ ಘಟನೆ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಭಟ್ರಕೆರೆ ಸಮೀಪದ ಕಣಿಕಟ್ಟ ಕಿರುಸೇತುವೆ ಬಳಿ ನಡೆದಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

ಮೇಲ್ನೋಟಕ್ಕೆ ಈ ಯುವಕ ಇಲ್ಲಿನ ಪೆರ್ಮುದೆಯಲ್ಲಿರುವ ಕಂಪೆನಿಯ ಕಾರ್ಮಿಕನಾಗಿರಬಹುದು ಎಂದು ಹೇಳಲಾಗುತ್ತಿದೆ. ಸುಮಾರು 25ರಿಂದ 30 ವರ್ಷ ವಯಸ್ಸಿನ ಈತನ ಗುರುತು ಪತ್ತೆಯಾಗಿಲ್ಲ. ಬುಧವಾರ ತಡರಾತ್ರಿ ಈತನನ್ನು ಕೊಲೆಗೈದು ಬಳಿಕ ಸೇತುವೆಯ ಬಳಿ ಎಸೆದು ಹೋಗಿರುವ ಸಾಧ್ಯತೆ ಇದೆ. ಮುಂಜಾನೆ ಈ ದಾರಿಯಾಗಿ ಸಾಗುವ ಮಂದಿ ಅಪರಿಚಿತ ಶವವನ್ನು ಕಂಡು ಬಜ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಆಗಮಿಸಿ ಶವದ ಮಹಜರು ನಡೆಸಿ ವೆನ್ಲಾಕ್ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಯುವಕನ ಹಣೆ ಮತ್ತು ತಲೆ ಹಿಂಭಾಗದಲ್ಲಿ ಯಾವುದೋ ಆಯುಧದಿಂದ ಹೊಡೆದಿರುವ ಆಳವಾದ ಗುರುತು ಇದೆ. ಅಲ್ಲದೆ ಕತ್ತಿನಲ್ಲಿ ಹಗ್ಗ ಬಿಗಿದಿರುವ ಗುರುತು ಕೂಡಾ ಪತ್ತೆಯಾಗಿದ್ದು, ಇದು ಕೊಲೆ ಕೃತ್ಯದಿಂದಾದ ಸಾವು ಎನ್ನುವುದು ಸ್ಪಷ್ಟವಾಗಿದೆ.

ಮೃತ ಯುವಕ ಜೀನ್ಸ್ ಪ್ಯಾಂಟ್, ಬನಿಯನ್ ಧರಿಸಿದ್ದು, ಹಿಂದಿ ಭಾಷಿಗನಂತೆ ಗೋಚರಿಸುತ್ತಿದ್ದಾನೆ. ಆದರೆ ಮೃತನ ಬಳಿ ಯಾವುದೇ ಗುರುತು ಚೀಟಿ ದೊರಕದ ಕಾರಣ ಈತನ ವಿಳಾಸ ಪತ್ತೆಹಚ್ಚುವುದು ಕಷ್ಟವಾಗಿದೆ.

ಘಟನಾ ಸ್ಥಳಕ್ಕೆ ಶ್ವಾನ ದಳ ಭೇಟಿ ನೀಡಿದೆ. ಬಜ್ಪೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆದರೆ ಆರೋಪಿಗಳ ಬಗ್ಗೆ ಇದುವರೆಗೂ ಯಾವುದೇ ಸುಳಿವು ಲಭ್ಯವಾಗಿಲ್ಲ.