ಯೋಗಿಯ ನಾಡಿನಲ್ಲಿ ಈ ಯುವಕ 42 ದಿನ ಜೈಲು ಪಾಲಾಗಲು ಮಾಡಿದ ಅಪರಾಧವೇನು ?

ಇಲ್ಲಿ ನೀಡಲಾಗಿರುವ ಚಿತ್ರದಲ್ಲಿ ಕಾಣುವ ಯುವಕನ ಹೆಸರು ಝಾಕಿರ್ ಅಲಿ ತ್ಯಾಗಿ. ವಯಸ್ಸು ಕೇವಲ 18. ಎಪ್ರಿಲ್ 2ರ ರಾತ್ರಿಯಂದು ಆತನನ್ನು ಪೊಲೀಸರು ಮುಝಫ್ಫರನಗರದ ಆತನ ಮನೆಯಿಂದ ಬಂಧಿಸಿ ಬರೋಬ್ಬರಿ 42 ದಿನಗಳ ಕಾಲ ಜೈಲಿನಲ್ಲಿರಿಸಲು ಸಫಲರಾದರು. ಸದ್ಯ ಈತ ಜಾಮೀನಿನ ಮೇಲಿದ್ದಾನೆ. ಅಷ್ಟಕ್ಕೂ ಆತನನ್ನು ಬಂಧಿಸಲು ಕಾರಣವೇನು ಗೊತ್ತೇ ? ಆತ ತನ್ನ ಫೇಸ್ಬುಕ್ ಪೋಸ್ಟುಗಳಲ್ಲಿ ನಿರ್ಭೀತಿಯಿಂದ ವ್ಯಕ್ತಪಡಿಸಿದ ಆತನ ಅಭಿಪ್ರಾಯಗಳೇ ಇದಕ್ಕೆ ಕಾರಣ.

ಭಾರತದ ಪವಿತ್ರ ನದಿ ಗಂಗೆಗೆ ಜೀವಂತ ವ್ಯಕ್ತಿ ಸ್ಥಾನಮಾನವನ್ನು ನ್ಯಾಯಾಲಯವೊಂದು ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಆತ “ಹಾಗಾದರೆ ಗಂಗೆಯಲ್ಲಿ ಯಾರಾದರೂ ಮುಳುಗಿ ಸಾವನ್ನಪ್ಪಿದರೆ ಆಕೆಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗುವುದೇ ?’ ಎಂದು ಪ್ರಶ್ನಿಸಿದ್ದ. “ಏರ್ ಇಂಡಿಯಾಗೆ ನೀಡಲಾಗುತ್ತಿರುವ ಹಜ್ ಸಬ್ಸಿಡಿಯನ್ನು ಕೇಂದ್ರವೇಕೆ ನಿಲ್ಲಿಸುತ್ತಿಲ್ಲ ?” ಎಂದೂ ತನ್ನ ಪೋಸ್ಟ್ ಒಂದರಲ್ಲಿ ಪ್ರಶ್ನಿಸಿದ್ದ ಈ ಯುವಕ ರಾಮ ಮಂದಿರ ವಿಚಾರದ ಬಗ್ಗೆಯೂ ಬರೆದಿದ್ದಾನಲ್ಲದೆ “ರಾಮ ಮಂದಿರದ ಭರವಸೆ ಕೇವಲ ಒಂದು ಗಿಮ್ಮಿಕ್, ಮುಂದಿನ ಚುನಾವಣೆ ವೇಳೆಗೆ ಮತದಾರರನ್ನು ಸೆಳೆಯಲು ಮತ್ತದೇ ಭರವಸೆಯನ್ನು ನೀಡಲಾಗುತ್ತದೆ” ಎಂದು ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ.

ನಲ್ವತ್ತೆರಡು ದಿನಗಳ ನಂತರ ಬಿಡುಗಡೆಯಾದರೂ ಆತನ ಕಷ್ಟ ತೀರಿಲ್ಲ. ಆತನ ವಕೀಲರ ಪ್ರಕಾರ ಇದೀಗ ಪೊಲೀಸರು ಆತನ ವಿರುದ್ಧ ದೇಶದ್ರೋಹಕ್ಕೆ ಸಂಬಂಧ ಪಟ್ಟಂತಹ ಸೆಕ್ಷನ್ 124ಎ ಅನ್ವಯದ ಪ್ರಕರಣವನ್ನೂ ಆರೋಪಪಟ್ಟಿಯಲ್ಲಿ ಸೇರಿಸಿದ್ದಾರೆ. ಸ್ಟೀಲ್ ಫ್ಯಾಕ್ಟರಿಯೊಂದರ ಟ್ರಾನ್ಸಪೋರ್ಟರ್ ಬಳಿ ಉದ್ಯೋಗದಲ್ಲಿದ್ದು ರೂ 8000 ವೇತನ ಪಡೆಯುತ್ತಿದ್ದ ಆತ ಈಗ ತನ್ನ ಉದ್ಯೋಗವನ್ನೂ ಕಳೆದುಕೊಂಡಿದ್ದಾನೆ.

ಪ್ರಸಕ್ತ ಈತ ಸ್ವಾಮಿ ವಿವೇಕಾನಂದ ಸುಭರ್ತಿ ವಿಶ್ವವಿದ್ಯಾಲಯ, ಮೀರತ್ ಮುಖಾಂತರ ಬಿ ಎ ಕರೆಸ್ಪಾಂಡೆನ್ಸ್ ಕೋರ್ಸ್ ಮಾಡುತ್ತಿದ್ದಾನೆ.