ಹಾದಿ ತಪ್ಪುತ್ತಿರುವ ಯುವಜನಾಂಗ

ಹಾದಿ ತಪ್ಪುತ್ತಿರುವ ಯುವಜನಾಂಗ

ನಮ್ಮ ಪ್ರತಿನಿಧಿ ವರದಿ

ಅಂಕೋಲಾ : ಬದಲಾಗುತ್ತಿರುವ ತಾಂತ್ರಿಕ ಯುಗದಲ್ಲಿ ಯುವಕ-ಯುವತಿಯರು ದಾರಿ ತಪ್ಪುತ್ತಿರುವ ಸನ್ನಿವೇಶ ಎಲ್ಲೆಡೆ ಕಂಡುಬರುತ್ತಿದೆ. ಹದಿಹರೆಯದ ಯುವಕ-ಯುವತಿಯರು ಮತ್ತು ಕಾಲೇಜು ವಿದ್ಯಾರ್ಥಿಗಳು ಮಾದಕ ದ್ರವ್ಯಕ್ಕೆ ಒಳಗಾಗುವುದರ ಜೊತೆಗೆ ಹುಡುಗಿಯರು ದಾರಿ ತಪ್ಪಿ ಬೆಟ್ಟ, ಗುಡ್ಡಗಳತ್ತ ಅಲೆಯುತ್ತಿರುವ ದೃಶ್ಯ ತಾಲೂಕಿನಲ್ಲಿ ಕಂಡುಬರುತ್ತಿದೆ.

ಬಹುತೇಕ ಮೊಬೈಲ್ ಅಂಗಡಿಗಳಲ್ಲಿ ಕರೆನ್ಸಿ ಹಾಕಿಸಿಕೊಳ್ಳುವ ಹುಡುಗಿಯರು ನಂತರ ಅದೇ ನಂಬರಿಗೆ ಕಾಲ್ ಹೋಗಿ ನಿಮಗೆ ಕರೆನ್ಸಿ ಬಂದಿದೆಯಾ ಎಂಬ ಸಲುಗೆಯ ಮಾತಿನೊಂದಿಗೆ ಆರಂಭಗೊಂಡು ವಿವಿಧ ಅಡ್ಡದಾರಿ ಹಿಡಿದ ಪ್ರಸಂಗಗಳಿಗೇನೂ ಕಡಿಮೆಯಿಲ್ಲ. ಹುಡುಗಿಯರು ಕೂಡ ಪುಕ್ಕಟೆ ಕರೆನ್ಸಿ ಹಾಕಿಸಿಕೊಳ್ಳುವುದು, ತಮಗೆ ಬೇಕಾದ ವಸ್ತುಗಳನ್ನು ಹುಡುಗರಿಂದ ತರಿಸಿಕೊಳ್ಳುವುದು ಮಾಡಿದರೆ ಇನ್ನು ಕೆಲವು ಕಲ್ಪನಾ ಲೋಕದಲ್ಲಿರುವ ಹುಡುಗಿಯರು ಹುಡುಗರ ಜೊತೆ ಬೈಕ್, ಕಾರಿನಲ್ಲಿ ಮೋಜು ಮಸ್ತಿಗೆ ತೆರಳುತ್ತಿರುವ ದೃಶ್ಯ ಅಲ್ಲಲ್ಲಿ ಕಂಡುಬರುತ್ತಿದೆ.

ಪಟ್ಟಣದ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿನಿಯು ಯೂನಿಫಾರ್ಮಿನಲ್ಲಿಯೇ ನೀಲಿಚಿತ್ರದಲ್ಲಿ ಕಂಡುಬಂದಿರುವುದು ಕಾಲೇಜಿನ ಗೌರವಕ್ಕೆ ಕುಂದು ಬಂದಿದ್ದರಿಂದಾಗಿ ಪಾಲಕರನ್ನು ಕರೆಸಿ ಆ ವಿದ್ಯಾರ್ಥಿನಿಯ ಟಿಸಿ ಕೊಟ್ಟು ಕಳುಹಿಸಿದ ಉದಾಹರಣೆಯಿದೆ. ಇನ್ನು ವಿವಿಧ ಬೀಚುಗಳು ಮತ್ತು ಕುರುಚಲು ಕಾಡುಗಳಲ್ಲಿ ಸುತ್ತಾಡುವುದು ಕಂಡುಬರುತ್ತಿದೆ.

ಒಂದು ಹುಡುಗಿಗೆ ಎರಡ್ಮೂರು ಹುಡುಗರ ಜೊತೆ ಸಲುಗೆಯಿದ್ದರೆ, ಇನ್ನು ಹುಡುಗರೂ ಕೂಡ ಇದೇ ದಾರಿಯನ್ನು ಅನುಸರಿಸುತ್ತಿದ್ದಾರೆ. ಬಂದಷ್ಟು ಬರಲಿ ಎಂದು ಹುಡುಗಿಯರು ಹುಡುಗರ ಜೊತೆ ತಿರುಗಾಡಿ ನಂತರ ಅಪ್ಪ-ಅಮ್ಮ ತೋರಿಸಿದ ಗಟ್ಟಿ ಕುಳದವರಿಗೆ ಮದುವೆಯಾಗಿ ಹೋಗುತ್ತಾರೆ. ಕೆಲವು ಹುಡುಗ-ಹುಡುಗಿಯರಿಂದಾಗಿ ಇಡೀ ಸಮಾಜವೇ ಶಾಪಕ್ಕೆ ಒಳಗಾದಂತೆ ಕಂಡುಬರುತ್ತಿದೆ. ಇನ್ನು ಹುಡುಗರು ಇವುಗಳನ್ನು ಹೊರತುಪಡಿಸಿ ಮದ್ಯ ಹಾಗೂ ಗಾಂಜಾ ಸೇವನೆಯತ್ತ ಆಕರ್ಷಿತರಾಗುತ್ತಿದ್ದಾರೆ.

ಸಾಲ ಮಾಡಿ ಪಾಲಕರು ತಮ್ಮ ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಕಳುಹಿಸಿದರೆ ಅವರ ಕಷ್ಟಗಳು ಇವರ ಕಣ್ಣಿಗೆ ಕಾಣದೇ ತಮ್ಮದೇ ಲೋಕದಲ್ಲಿ ಮುಳುಗಿರುತ್ತಾರೆ. ಇದರಿಂದ ಎಷ್ಟೋ ತಂದೆ-ತಾಯಿಗಳು ತಲೆ ಎತ್ತಿ ತಿರುಗಲಾರದಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಹಾಗೇ ತಾಲೂಕಿನ ಸುಶಿಕ್ಷಿತ ಮತ್ತು ಆರ್ಥಿಕ ಬಲಾಢ್ಯ ಹೊಂದಿದ ಸಮಾಜದಲ್ಲಿ ಅತೀ ಹೆಚ್ಚು ವಿಚ್ಛೇದನ ಪ್ರಕರಣಗಳು ನಡೆಯುತ್ತಿದೆ. ಜೊತೆಗೆ ಮದುವೆಯಾದ ನಂತರ ವರದಕ್ಷಿಣೆ ನೆಪದಲ್ಲಿ ಪತಿ ಹಾಗೂ ಅವರ ಕುಟುಂಬದವರನ್ನು ಹೆದರಿಸುವ ತಂತ್ರಗಾರಿಕೆಯನ್ನು ಕೂಡ ಕೆಲವು ಹೆಣ್ಣುಮಕ್ಕಳು ರೂಢಿಸಿಕೊಂಡಿದ್ದಾರೆ. ಎಷ್ಟೋ ಗಂಡಂದಿರು ಮರ್ಯಾದೆಗೆ ಅಂಜಿ ಮೌನವಾಗಿದ್ದಾರೆ.