ಚರಂಡಿಗೆಬಿದ್ದು ಯುವಕ ಸಾವು

ಶಾಸಕ ಬಾವ ವಿರುದ್ಧ ಸ್ಥಳೀಯರ ಕೋಪ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಗುತ್ತಿಗೆದಾರನ ಬೇಜವಾಬ್ದಾರಿಯ ಕಾಮಗಾರಿಗೆ ಹದಿಹರೆಯದ ಯುವಕನೊಬ್ಬ ಒಳಚರಂಡಿ ಕಾಮಗಾರಿಯ ಗುಂಡಿಗೆ ಬಿದ್ದು ಕಾಟಿಪಳ್ಳ ಒಂದನೇ ಬ್ಲಾಕ್ ನಿವಾಸಿ ಗಣೇಶ್ ಕೃಪಾ ಮನೆಯ ಮೋಹನ್ (35) ಮೃತಪಟ್ಟಿದ್ದಾನೆ. ಶನಿವಾರ ರಾತ್ರಿ ಸುಮಾರು 7.30ಕ್ಕೆ ಮೋಹನ್ ಅವರು ಆಕಸ್ಮಿಕವಾಗಿ ಈ ಗುಂಡಿಗೆ ಬಿದ್ದಿದ್ದಾರೆ.

ಇಲ್ಲಿ ಒಳಚರಂಡಿ ಕಾಮಗಾರಿಯ ಗುಂಡಿ ಅಗೆಯಲಾಗಿದೆ ಎನ್ನುವ ಕಲ್ಪನೆಯೇ ಇಲ್ಲದ ಮೋಹನ್ ರಾತ್ರಿ ಈ ಮಾರ್ಗದ ಮೂಲಕ ಮನೆಗೆ ಹೋಗುತ್ತಿದ್ದು, ಗುಂಡಿಗೆ ಬಿದ್ದು ಗಂಭೀರಗಾಯಗೊಂಡಿದ್ದರು. ಕೂಡಲೇ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಸ್ಪಂದಿಸದೇ ಸಾವನ್ನಪ್ಪಿದರು.

ಸುರತ್ಕಲ್ ಠಾಣೆಯಲ್ಲಿ ಗುತ್ತಿಗೆದಾರನ ವಿರುದ್ಧ ದೂರು ನೀಡಲಾಗಿದೆ.

ಶಾಸಕರನ್ನು ದೂರುತ್ತಿರುವ ಸ್ಥಳೀಯರು : ಗುತ್ತಿಗೆದಾರನ ಬೇಜವಾಬ್ದಾರಿಯೇ ಈ ಘಟನೆಗೆ ಕಾರಣ ಎಂದಿರುವ ಸ್ಥಳೀಯರು ಇಂತಹ ಕಾಮಗಾರಿಯ ಬಗ್ಗೆ ಮುನ್ನೆಚ್ಚರಿಕೆ ವಹಿಸದಿರುವುದಕ್ಕೆ ಶಾಸಕ ಮೊಯ್ದೀನ್ ಬಾವ ಅವರನ್ನು ದೂರಿದ್ದಾರೆ.

ವಿಷಯ ತಿಳಿದು ಘಟನಾ ಆಗಮಿಸಿದ ಶಾಸಕ ಮೊಯ್ದಿನ್ ಬಾವ ಅವರು ಗುತ್ತಿಗೆದಾರರನ್ನು ಫೋನ್ ಮೂಲಕ ತರಾಟೆಗೆ ತೆಗೆದುಕೊಂಡ ರೀತಿ ನಾಟಕ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕೇವಲ ಬಾಯಿ ಮಾತಿಗೋಸ್ಕರ ಶಾಸಕರು ಸ್ಥಳೀಯರ ಕಣ್ಣೆದುರಿನಲ್ಲಿ ಅಧಿಕಾರಿಗಳಿಗೆ ಬೈಯುತ್ತಿದ್ದಾರೆ ವಿನಾ ಬಳಿಕ ಪ್ರತೀ ಕಾಮಗಾರಿಯ ಹಿಂದೆ ಕಮಿಷನ್ ಹೊಡೆಯುತ್ತಿದ್ದಾರೆ. ಇದೇ ಕಾರಣಕ್ಕೆ ಇಂತಹ ಅರೆಬರೆ ಕಾಮಗಾರಿಗಳು ನಡೆಯುತ್ತಿದೆ ಎಂದು ದೂರಿದ್ದಾರೆ.

“ಘಟನೆ ನಡೆದ ತಕ್ಷಣ ಓಡಿ ಬರುವ ಶಾಸಕ ಬಾವ ಎಲ್ಲವನ್ನೂ ತಾನೇ ನೋಡಿಕೊಳ್ಳುವುದಾಗಿ ಹೇಳಿ ಬಳಿಕ ಕ್ಷೇತ್ರದಿಂದಲೇ ನಾಪತ್ತೆಯಾಗುತ್ತಿದ್ದಾರೆ. ಮತ್ತೆ ಇಂತಹ ಘಟನೆಗಳು ನಡೆದ ಬಳಿಕ ಸ್ಥಳಕ್ಕೆ ಹಾಜರಾಗುತ್ತಿದ್ದಾರೆ. ಅವರ ಕ್ಷೇತ್ರ ವ್ಯಾಪ್ತಿಯಲ್ಲಿ ಹೊಂಡಗುಂಡಿಗಳ ಬಿದ್ದ ರಸ್ತೆಗಳಿವೆ. ಒಳಚರಂಡಿ ಕಾಮಗಾರಿಗಳನ್ನೂ ಸರಿಯಾಗಿ ನಿರ್ವಹಿಸುತ್ತಿಲ್ಲ. ಕಣ್ಣೆದುರೇ ಇರುವ ಸಾವಿರಾರು ಸಮಸ್ಯೆಗಳ ಬಗ್ಗೆ ಗಮನ ಹರಿಸದ ಬಾವ, ಕೇವಲ ಬ್ಯಾನರ್ ಹಾಕಿಕೊಂಡು ಬಿಟ್ಟಿ ಪ್ರಚಾರ ಪಡೆಯುತ್ತಿದ್ದಾರೆ” ಎಂದು ಸ್ಥಳೀಯರು ಶಾಸಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

 

 

LEAVE A REPLY