ಒಳಚರಂಡಿ ಹೊಂಡಕ್ಕೆ ಬಿದ್ದ ಯುವಕ ಮೃತ

ಕುಂದಾಪುರ : ಒಳಚರಂಡಿ ತ್ಯಾಜ್ಯದ ಪೈಪ್‍ಲೈನ್ ಕಾಮಗಾರಿ(ಯುಜಿಡಿ)ಯನ್ನು ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಮಣ್ಣು ಕುಸಿದು ಅಲ್ಲಿ ಕೆಲಸ ಮಾಡಿಕೊಂಡಿದ್ದ ಬಿಹಾರ ಮೂಲದ  ರೂಪೇಶ್ ಪಾಸ್ವಾನ್ (21) ಎಂಬ ಯುವಕ ಅದೇ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ.

ದುರ್ಘಟನೆ ಕುಂದಾಪುರದ ವ್ಯಾಸರಾಯ ಮಠದ ಹಿಂದಿನ ರಸ್ತೆಯಲ್ಲಿ ನಡೆದಿದೆ. ಭಾನುವಾರ ಮಧ್ಯಾಹ್ನ ನಗರದ ವಿವಿಧ ರಸ್ತೆಗಳಲ್ಲಿ ಯುಜಿಡಿ ಕಾಮಗಾರಿಗೋಸ್ಕರ ರಸ್ತೆಯನ್ನು ಅಗೆದು ಪೈಪ್‍ಲೈನ್ ಕಾಮಗಾರಿಯನ್ನು ನಡೆಸಲಾಗುತ್ತಿತ್ತು. ಮಠದ ಪಕ್ಕದಲ್ಲಿ ಹಾದುಹೋಗುವ ರಸ್ತೆಯಲ್ಲಿ ಜೆಸಿಬಿ ಮೂಲಕ ರಸ್ತೆ ಅಗೆಯುತ್ತಿದ್ದಾಗ ರಸ್ತೆಯ ಮಣ್ಣು  ಕುಸಿಯಿತು. ಅಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದ  ರೂಪೇಶ್ ಆಯತಪ್ಪಿ ಹೊಂಡಕ್ಕೆ ಬಿದ್ದಾಗ ಮಣ್ಣು ಜರಿದು ಆತನ ಮೇಲೆ ಬಿದ್ದ ಪರಿಣಾಮ  ಉಸಿರುಗಟ್ಟಿ ಮೃತಪಟ್ಟಿದ್ದಾನೆ.