ಕುಮಾರಧಾರಾ ನದಿಗಿಳಿದ ಯುವಕ ನೀರಲ್ಲಿ ಮಳುಗಿ ದಾರುಣ ಸಾವು

ಒಬ್ಬನ ರಕ್ಷಣೆ

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : ಇಲ್ಲಿನ ಕುಮಾರಧಾರಾ ನದಿಯಲ್ಲಿ ಸ್ನಾನಕ್ಕೆಂದು ಇಳಿದಿದ್ದ ಏಳು ಮಂದಿ ಯುವಕರ ತಂಡದಲ್ಲಿದ್ದ ವಿಜಯ (25) ಎಂಬಾತ ನದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಗುರುವಾರ ಮಧ್ಯಾಹ್ನ ಸಂಭವಿಸಿದೆ.

ಮೃತ ವಿಜಯ ಮೂಲತಃ ಸಕಲೇಶಪುರ ಹೆಬ್ಸಾಲೆಯ ಕಲ್ಲುಕ್ವಾರಿ ನಿವಾಸಿ ಕರಿಯಪ್ಪ ಎಂಬವರ ಮಗನೆಂದು ತಿಳಿದು ಬಂದಿದ್ದು, ಕಳೆದ ಮೂರು ತಿಂಗಳ ಹಿಂದೆ ಕೊಡಿಂಬಾಡಿ ಗ್ರಾಮದ ತುರುಕೆದ ಗುರಿ ಎಂಬಲ್ಲಿನ ತನ್ನ ಸಂಬಂಧಿಕರ ಮನೆಗೆ ಬಂದವರು, ಅಲ್ಲಿಂದಲೇ ಸಂಬಂಧಿಕರೊಡಗೂಡಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರೆನ್ನಲಾಗಿದೆ.

ಗುರುವಾರದಂದು ಕೂಲಿ ಕೆಲಸಕ್ಕೆ ರಜೆ ಹಾಕಿ ತನ್ನ ಸಂಬಂಧಿಕ ಒಡನಾಡಿಗಳಾದ ಪವೀಂದ್ರ, ವಿಜಯ, ದಿನೇಶ, ಯೋಗೀಶ, ಗಣೇಶ, ರಮೇಶ, ಜಗದೀಶ ಎಂಬವರೊಂದಿಗೆ ಮೋಜಿಗಾಗಿ ಕುಮಾರಧಾರಾ ನದಿಗೆ ಬಂದವರು ನದಿಯಲ್ಲಿನ ಕಿಂಡಿ ಅಣೆಕಟ್ಟಿನ ಕೆಳ ಭಾಗದಲ್ಲಿ ಸ್ನಾನಕ್ಕೆ ಇಳಿದಿದ್ದರು. ಈ ವೇಳೆ ವಿಜಯ ಹಾಗೂ ಪವೀಂದ್ರ ಎಂಬಿಬ್ಬರು ನೀರಿನ ಸುಳಿಗೆ ಸಿಲುಕಿ ಮುಳುಗತೊಡಗಿದರು. ಸಹಾಯಕ್ಕಾಗಿ ಅವರಿಬ್ಬರು ಬೊಬ್ಬೆ ಹೊಡೆದಾಗ ಜೊತೆಗಾರರು ಪವೀಂದ್ರನನ್ನು ಹಿಡಿದೆಳೆದು ರಕ್ಷಿಸಿದರಾದರೂ, ಆ ವೇಳೆಗೆ ವಿಜಯ ನೀರಿನಲ್ಲಿ ಮುಳುಗಿಯಾಗಿತ್ತು.

ತನ್ನ ಸಂಗಡಿಗನೊಬ್ಬ ನದಿ ನೀರಿನಲ್ಲಿ ಮುಳುಗಿರುವುದನ್ನು ಸ್ಥಳೀಯರಿಗೆ ತಿಳಿಸಿದ ಹಿನ್ನೆಲೆಯಲ್ಲಿ ಪೆÇಲೀಸರಾದಿಯಾಗಿ ಜನ ಸಮೂಹ ಸ್ಥಳಕ್ಕೆ ಧಾವಿಸಿದತ್ತಾದರೂ ವಿಜಯನನ್ನು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ಈ ವೇಳೆ ಸ್ಥಳೀಯ ಈಜುಗಾರರಾದ ಜಿ ಮಹಮ್ಮದ್, ಮಹಮ್ಮದ್, ಮುಸ್ತಾಫ ನೆಕ್ಕಿಲಾಡಿ, ಫಯಾಝ್, ಮಹಮ್ಮದ್ ಮುಸ್ತಾಫ ಹಾಗೂ ಹಮೀದ್ ಬಂಡಾಡಿ ಎಂಬವರು ನದಿಗಿಳಿದು ವಿಜಯನನ್ನು ಪತ್ತೆ ಹಚ್ಚಲು ಮುಂದಾದರು. ಈ ವೇಳೆ ಹಮೀದ್ ಬಂಡಾಡಿ ಅಪಾಯಕಾರಿಯಾದ ಗಯಕ್ಕೆ ದುಮುಕಿ ಅಲ್ಲಿ ತಳ ಕಂಡಿದ್ದ ಶವದ ಕಾಲು ಹಿಡಿದು ದೇಹವನ್ನು ಹೊರತೆಗೆದರು.