ಚೂರಿ ಇರಿತ ಯುವಕ ಗಂಭೀರ

ಹೋಟೆಲ್ ಮಾಲಕ –
ಯುವಕರ ಚಕಮಕಿ

ನಮ್ಮ ಪ್ರತಿನಿಧಿ ವರದಿ
ಬಂಟ್ವಾಳ : ಹೋಟೆಲ್ ಮಾಲಕ ಹಾಗೂ ಯುವಕರ ಮಧ್ಯೆ ನಡೆದ ಕ್ಷುಲ್ಲಕ ಮಾತಿನ ಚಕಮಕಿ ಬಳಿಕ ಚೂರಿ ಇರಿತದಿಂದ ಪರ್ಯಾವಸಾನಗೊಂಡಿದ್ದು, ಯುವಕನೊಬ್ಬ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಘಟನೆ ಇಲ್ಲಿನ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಾಣೆಮಂಗಳೂರು ಎಂಬಲ್ಲಿ ಶನಿವಾರ ರಾತ್ರಿ ನಡೆದಿದೆ.
ಚೂರಿ ಇರಿತದಿಂದ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಯುವಕ ಪಾಣೆಮಂಗಳೂರು ಸಮೀಪದ ನೆಹರುನಗರ ನಿವಾಸಿ ಅಬ್ದುಲ್ ರಝಾಕ್ ಎಂಬವರ ಪುತ್ರ ಮುಹಮ್ಮದ್ ನೌಫಲ್ (24). ಆರೋಪಿ ಹೋಟೆಲ್ ಮಾಲಿಕ ಮೆಲ್ಕಾರ್ ನಿವಾಸಿ ಅಹ್ಮದ್ ಬಾವಾ ಎಂಬವರ ಪುತ್ರ ಯಾಸೀನ್ (30) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಸಂದರ್ಭ ನೆಹರುನಗರ ಹಾಗೂ ಪಾಣೆಮಂಗಳೂರು ಆಸುಪಾಸಿನ ಯುವಕರು ಸ್ಥಳದಲ್ಲಿ ಜಮಾಯಿಸಿದ್ದು, ಘರ್ಷಣೆಯ ವಾತಾವರಣ ನಿರ್ಮಾಣಗೊಂಡಿತ್ತು. ಈ ಸಂದರ್ಭ ಹೊಟೆಲ್ ಗಾಜುಗಳು ಪುಡಿಯಾಗಿದ್ದು, ಹೋಟೆಲಿಗೂ ಅಲ್ಪ ಪ್ರಮಾಣದ ಹಾನಿ ಸಂಭವಿಸಿದೆ. ಬಳಿಕ ಹೆಚ್ಚುವರಿ ಸಿಬ್ಬಂದಿಗಳೊಂದಿಗೆ ಸ್ಥಳಕ್ಕಾಗಮಿಸಿದ ಬಂಟ್ವಾಳ ನಗರ ಠಾಣಾಧಿಕಾರಿ ನಂದಕುಮಾರ್ ಆರೋಪಿ ಹೋಟೆಲ್ ಮಾಲಿಕನನ್ನು ವಶಕ್ಕೆ ಪಡೆದುಕೊಂಡಿದ್ದು, ಸ್ಥಳದಲ್ಲಿ ಜಮಾಯಿಸಿದ ಯುವಕರನ್ನು ಚದುರಿಸಿ ಪರಿಸ್ಥಿತಿ ಹತೋಟಿಗೆ ತಂದಿದ್ದಾರೆ. ಚೂರಿ ಇರಿತದಿಂದ ಗಾಯಗೊಂಡ ನೌಫಲ್‍ನನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.