ಆಧಾರ್ ಕಾರ್ಡ್ ಸಮಸ್ಯೆ ಪರಿಹರಿಸದಿದ್ದಲ್ಲಿ ಹೋರಾಟ

ಯುವ ಕಾಂಗ್ರೆಸ್ ಎಚ್ಚರಿಕೆ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಆಧಾರ್ ಕಾರ್ಡ್ ಸಮಸ್ಯೆಯಿಂದ ಜನ ತತ್ತರಿಸುತ್ತಿದ್ದರೂ ಅಧಿಕಾರಿಗಳು ಗಾಢ ನಿದ್ರೆಯಲ್ಲಿದ್ದು, ತಕ್ಷಣವೇ ಈ ಸಮಸ್ಯೆ ಪರಿಹಾರ ಮಾಡದಿದ್ದಲ್ಲಿ ಕಾರ್ಕಳ ಯುವ ಕಾಂಗ್ರೆಸ್ಸಿನವತಿಯಿಂದ ಹೋರಾಟ ನಡೆಸಲಾಗುವುದೆಂದು ಕಾರ್ಕಳ ತಹಶೀಲ್ದಾರಗೆ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ಇನ್ನಾ ಮನವಿ ಸಲ್ಲಿಸಿದ್ದಾರೆ.

ಕೇಂದ್ರ ಸರ್ಕಾರದ ನಡಾವಳಿಯಂತೆ ಸರ್ಕಾರದ ಯಾವುದೇ ಮೂಲಭೂತ ಸೌಕರ್ಯಗಳನ್ನು ಪಡೆಯುವುದಿದ್ದರೂ ಆಧಾರ್ ಸಂಖ್ಯೆ ಕಡ್ಡಾಯವಾಗಿದ್ದು, ಇದರಿಂದ ವಿದ್ಯಾರ್ಥಿಗಳು ಸಹಿತ ಸಾರ್ವಜನಿಕರು ನಿತ್ಯ ಸಮಸ್ಯೆ ಅನುಭವಿಸುವಂತಾಗಿದೆ. ಈ ಬಗ್ಗೆ ಬಹಳಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಫಲ ಕಂಡಿಲ್ಲ. ಆಧಾರಿಗಾಗಿ ಅರ್ಜಿ ನೀಡಿದ ಒಂದು ವಾರದೊಳಗೆ ಆಧಾರ್ ಜನರ ಕೈ ಸೇರಬೇಕಾಗಿದೆ. ತಪ್ಪಿದ್ದಲ್ಲಿ ಕಾರ್ಕಳ ಯುವ ಕಾಂಗ್ರೆಸ್ ಕಾರ್ಯಕರ್ತರು ಸಹಿತ ಸಾರ್ವಜನಿಕರನ್ನು ಸೇರಿಸಿ ಉಗ್ರ ಹೋರಾಟ ನಡೆಸಲಿದೆ ಎಂಬುದಾಗಿ ದೀಪಕ್ ಕೋಟ್ಯಾನ್ ಎಚ್ಚರಿಸಿದ್ದಾರೆ.