ಎಂಪಿ ನಳಿನ್ ರಾಜೀನಾಮೆಗೆ ಯೂತ್ ಕಾಂಗ್ರೆಸ್ ಆಗ್ರಹ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕರ್ತವ್ಯ ನಿರತ ಪೊಲೀಸ್ ಅಧಿಕಾರಿಯನ್ನು ತರಾಟೆಗೆತ್ತಿಕೊಂಡಿರುವ ಮಂಗಳೂರು ಸಂಸದ ನಳಿನ್ ಅವರ ವರ್ತನೆಯನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಯಿತು. ಸಂಸದರು ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

ಈ ಸಂದರ್ಭ ಮಾತನಾಡಿದ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, “ಸಂಸದ ನಳಿನ್ ಬೀದಿ ಗೂಂಡಾನಂತೆ ವರ್ತಿಸುತ್ತಿದ್ದಾರೆ. ಈ ಮುಂಚೆ ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿ ಬಿದ್ದೀತು ಎಂದು ಹೇಳಿದ್ದ ಇದೇ ಸಂಸದರಿಗೆ ಹೇಗೆ ವರ್ತಿಸಬೇಕೆಂಬ ಕನಿಷ್ಠ ಜ್ಞಾನವೂ ಇಲ್ಲ. ಸಾರ್ವಜನಿಕರ ಪ್ರತಿನಿಧಿಯಾಗಿರುವ ಒಬ್ಬ ಜವಾಬ್ದಾರಿಯುತ ವ್ಯಕ್ತಿ ತನ್ನ ಗೂಂಡಾ ಸಹಚರರೊಂದಿಗೆ ಸೇರಿಕೊಂಡು ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿರುವುದು ಅವರ ಸಂಸ್ಕøತಿಯನ್ನು ತೋರಿಸುತ್ತಿದೆ” ಎಂದರು.

“ಅವರು ಜನಪ್ರತಿನಿಧಿಯಾಗಲು ನಾಲಾಯಕ್” ಎಂದ ಮಿಥುನ್, “ಸಾರ್ವಜನಿಕರಿಗೆ ಬೆದರಿಕೆ ಹಾಕುವ, ಅಧಿಕಾರಿಯನ್ನು ತರಾಟೆಗೆ ತೆಗೆದುಕೊಳ್ಳುವ ಜನಪ್ರತಿನಿಧಿಗೆ ಕನಿಷ್ಠ ಕಾನೂನಿನ ಜ್ಞಾನವೂ ಇಲ್ಲ” ಎಂದರು.

“ತನ್ನ ಉದ್ರೇಕಕಾರಿ ಭಾಷಣದ ಮೂಲಕ ಜಿಲ್ಲೆಗೆ ಹೇಗೆ ಬೆಂಕಿ ಹಚ್ಚುವುದು ಎನ್ನುವುದನ್ನೇ ಅವರು ಕಲಿತಿರುವುದು” ಎಂದು ಟೀಕಿಸಿದರು. ಅಲ್ಲದೆ ಕೂಡಲೇ ಸಂಸದ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. ನಮ್ಮ ಪ್ರತಿಭಟನೆಯನ್ನು ಪ್ರತೀ ತಾಲೂಕು ಕೇಂದ್ರಗಳಲ್ಲೂ ನಡೆಸಲಾಗುವುದು ಎಂದರು.

1 COMMENT

  1. ಇಂತಹ ಕಚ್ದಾ ಮಂತ್ರಿಗಳಿಂದಲೇ ನಮ್ಮ ಭಾರತಕ್ಕೆ ಶನಿ ಹಿಡಿದದ್ದು. ದಯವಿಟ್ಟು ಇನ್ನಾದರೂ ಓಟು ನೀಡಿ ಹಾರೈಸುವ ನಾಗರಿಕರು ಎದ್ದೇಳುವಿರೋ ?

Comments are closed.