ತ್ಯಾಜ್ಯ ತುಂಬಿದ ಬಾವಿ ಸ್ವಚ್ಛ ಮಾಡಿದ ಯುವಕರು

ಶುಚೀಕರಿಸಿದ ಬಳಿಕ ಬಣ್ಣ ಬಳಿದ ಬಾವಿ

ನಮ್ಮ ಪ್ರತಿನಿಧಿ ವರದಿ
ಮಂಜೇಶ್ವರ : ವಾರ್ಡ್ ಸದಸ್ಯನ ಶುಚೀಕರಣ ಜಾಗೃತಿಯಿಂದ ಹಾಳು ಕೊಂಪೆಯಾದ ಬಾವಿಯೊಂದು ಉಪಯೋಗಪ್ರದವಾಗಿದೆ.
ಪೈವಳಿಕೆ ಗ್ರಾ ಪಂ ನಾಲ್ಕನೇ ವಾರ್ಡಿನ ಬಾಯಾರು ಸಹಕಾರಿ ಬ್ಯಾಂಕ್ ಬಳಿಯಿರುವ ಸಾರ್ವಜನಿಕ ಬಾವಿಯು ಕಳೆದ ಹಲವು ವರ್ಷಗಳಿಂದ ಕಸ ಕಡ್ಡಿಗಳನ್ನು ಎಸೆದು ತ್ಯಾಜ್ಯ ಕೇಂದ್ರವಾಗಿತ್ತು. ಊರ ನಾಗರಿಕರು, ಎಸ್ ಇ ಎಸ್ ಕ್ಲಬ್ ಸದಸ್ಯರು ಸಹಿತ ಡಿಫಿ ಕಾರ್ಯಕರ್ತರು ಜೊತೆಗೂಡಿ 20 ಅಡಿ ಆಳದ ಬಾವಿಯನ್ನು ಶುಚಿಗೊಳಿಸಿ, ಬಾವಿ ನೀರನ್ನು ಕುಡಿಯಲು ಯೋಗ್ಯ ಗೊಳಿಸಿದ್ದರು. ಇತ್ತೀಚೆಗೆ ಗ್ರಾ ಪಂ ಸದಸ್ಯ ರಹೀಂ ಸ್ಥಳೀಯ ಕಾರ್ಯಕರ್ತರನ್ನು ಒಟ್ಟುಗೂಡಿಸಿ ಬಾವಿ ಕಟ್ಟೆಗೆ ಬಣ್ಣ ಬಳಿದು ಮೆಚ್ಚುಗೆ ಕೆಲಸವನ್ನು ಮಾಡಿದ್ದಾರೆ.
ದುರಸ್ತಿಗೊಳಿಸಿದ ಬಾವಿಯಿಂದ ಕೆಳಗಿನ ಪೇಟೆಯ ಹಲವು ಅಂಗಡಿ, ಹೋಟೆಲುಗಳಿಗೆ ನೀರು ಪೂರೈಕೆ ಇದೇ ಬಾವಿಯಿಂದ ನಡೆಯುತ್ತಿದೆ. ಮಾರ್ಚ್-ಎಪ್ರಿಲ್ ತಿಂಗಳಿನಲ್ಲಿ ನೀರಿನ ಅಭಾವ ಉಂಟಾಗಲಿದ್ದು, ಕಾರ್ಯಕರ್ತರು ನಡೆಸಿದ ಪೂರ್ವಭಾವಿ ಕೆಲಸದಿಂದ ಅಸುಪಾಸಿನ ಮನೆಮಂದಿ ಹಾಗೂ ನಾಗರಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಬಾವಿಯ ಶುಚೀಕರಣ ಕಾರ್ಯದಲ್ಲಿ ಹಲವಾರು ಊರವರು ಕೈ ಜೋಡಿಸಿದರು.