ಸಾಮಾಜಿಕ ತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ಆರೋಪಿ ಪೊಲೀಸ್ ವಶ

ಇಲ್ಯಾಸ್

ನಮ್ಮ ಪ್ರತಿನಿಧಿ ವರದಿ

ವಿಟ್ಲ : ಯುವಕ ಹಾಗೂ ಆತನ ಕುಟುಂಬದ ಬಗ್ಗೆ ಸಾಮಾಜಿಕ ತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ಪ್ರಕರಣದ ಆರೋಪಿಯೊಬ್ಬನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿಟ್ಲ ಪಡ್ನೂರು ಗ್ರಾಮದ ಕಡಂಬು ನಿವಾಸಿ ಮಹಮ್ಮದ್ ನಿಝಾರ್ ಮತ್ತು ಆತನ ಕುಟುಂಬದ ಬಗ್ಗೆ ಕೆಲ ಸಮಯಗಳ ಹಿಂದೆ ವಾಟ್ಸಪ್ ಮತ್ತು ಫೇಸ್ಬುಕಿನಲ್ಲಿ ಸುಳ್ಳು ಸುದ್ದಿ ಹರಡಿಸಲಾಗಿತ್ತು. ಈ ಬಗ್ಗೆ ಜಿಲ್ಲಾ ಎಸ್ಪಿಗೆ ದೂರು ನೀಡಿದ್ದ ನಿಝಾರ್ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದರು. ಎಸ್ಪಿ ಆದೇಶದಂತೆ ತನಿಖೆ ನಡೆಸಿದ ವಿಟ್ಲ ಪೊಲೀಸರು ವಿದೇಶದಲ್ಲಿರುವ ಕಬಕ ನಿವಾಸಿ ಇಲ್ಯಾಸ್ ಮತ್ತು ವಿಟ್ಲ ಕಾನತ್ತಡ್ಕ ನಿವಾಸಿ ಆರಿಸ್ ವಿರುದ್ಧ ಐಟಿ ಕಾಯ್ದೆಯನ್ವಯ ಕೇಸು ದಾಖಲಿಸಿಕೊಂಡಿದ್ದರು. ಇಲ್ಯಾಸ್ ವಿದೇಶದಿಂದ ಬಂದಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆತನ ಮನೆಯಿಂದ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆ ಸಮಯ ಕೆಲದಿನಗಳ ಹಿಂದಷ್ಟೆ ಆರೋಪಿ ಇಲ್ಯಾಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದ ಕಾರಣ ಬಿಡುಗಡೆಗೊಳಿಸಿದ್ದು ಮತ್ತೊಬ್ಬ ಆರೋಪಿ ಕಾನತ್ತಡ್ಕದ ಆರಿಸ್ ಅಬುದಾಬಿಯಲ್ಲಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರೆತಿದೆ.