ಯುವತಿಗೆ ಅಶ್ಲೀಲ ಮೆಸೇಜ್ ಕಳಿಸಿದವ ಸೆರೆ

ಮೂವರ ವಿರುದ್ಧ ಕೇಸು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿಯ ಸ್ನೇಹ ಸಂಪಾದಿಸಿ ಬಳಿಕ ಆಕೆಯ ಮೊಬೈಲ್ ನಂಬರ್ ಪಡೆದು, ವಾಟ್ಸಪ್ಪಿಗೆ ಅಶ್ಲೀಲ ಸಂದೇಶ ಕಳುಹಿಸಿ, ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ ಆರೋಪದಲ್ಲಿ ಮೂರು ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಮುಖ ಆರೋಪಿಯನ್ನು ಮೂಡುಶೆಡ್ಡೆಯ ಪುನೀತ್ ರಾಜ್ (20) ಎಂದು ಗುರುತಿಸಲಾಗಿದೆ. ಈತ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ವಿದ್ಯಾರ್ಥಿನಿಯ ವಾಟ್ಸಪ್ಪಿಗೆ ಅಶ್ಲೀಲ ಸಂದೇಶಗಳನ್ನು ರವಾನಿಸಿದ್ದ. ಅಲ್ಲದೆ ವಿದ್ಯಾರ್ಥಿನಿ ಭಾವಚಿತ್ರವನ್ನು ವಿರೂಪಗೊಳಿಸಿ ಲೈಂಗಿಕ ಕ್ರಿಯೆ ನಡೆಸೆಂದು ಒತ್ತಾಯಿಸುತ್ತಿದ್ದ. ನೀನು ಸಹಕರಿಸದೇ ಹೋದಲ್ಲಿ ಎಲ್ಲರಿಗೂ ರವಾನಿಸಿ ಮಾನ ಹರಾಜು ಹಾಕುವುದಾಗಿ ಆರೋಪಿ ಆಕೆಯನ್ನು ಬೆದರಿಸಿದ್ದ. ಈತನ ಈ ಕೃತ್ಯಗಳಿಗೆ ಇನ್ನಿಬ್ಬರು ಸಹಕರಿಸಿದ್ದಾರೆನ್ನಲಾಗಿದೆ.

ಮೂಡುಶೆಡ್ಡೆಯ ಫ್ರಥ್ವಿ ಮತ್ತು ವಿಲಾಸ್ ಎಂಬವರೂ ಆತನಿಗೆ ಬೆಂಬಲ ನೀಡಿದ್ದರೆನ್ನಲಾಗಿದೆ. ಕಾವೂರು ಠಾಣಾ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ರೂವಾರಿ, ಪ್ರಮುಖ ಆರೋಪಿ ಪುನೀತ್ ರಾಜನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.