`ಯುವತಿಯರು ಕೂಗುತ್ತಿದ್ದರು, ಸಹಾಯ ಯಾಚಿಸಿ ಓಡುತ್ತಿದ್ದರು’

ಗಳೂರಿನ ಎಂ ಜಿ ರಸ್ತೆಯಲ್ಲಿ ಹೊಸ ವರ್ಷಾಚರಣೆಯ ಸಂದರ್ಭ ಯುವತಿಯರ ಮೇಲೆ ನಡೆದ ಲೈಂಗಿಕ ಕಿರುಕುಳ ಪ್ರಕರಣ ದೇಶದಾದ್ಯಂತ ಸುದ್ದಿಯಾಗುತ್ತಿದೆ. ಇಲ್ಲಿಯ ತನಕ ಸಂತ್ರಸ್ತ ಯುವತಿಯರ್ಯಾರೂ ದೂರು ನೀಡಲು ಮುಂದೆ ಬಂದಿಲ್ಲವಾದರೂ ಪೊಲೀಸರು ಸ್ವಯಂಪ್ರೇರಿತವಾಗಿ ಎಫ್ ಐ ಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಈತನ್ಮಧ್ಯೆ ಸಾಫ್ಟವೇರ್ ಇಂಜಿನಿಯರ್ ಆಗಿರುವ 25 ವರ್ಷದ ಮನೀಶಾ ಗುಪ್ತ ಕೂಡ ಹೊಸ ವರ್ಷದ ಹಿಂದಿನ ರಾತ್ರಿ ಎಂ ಜಿ ರಸ್ತೆಯ ಮೆಟ್ರೋ ಸ್ಟೇಶನಿನತ್ತ ನಡೆಯುತ್ತಿದ್ದಾಗ ತನಗಾದ ಘೋರ ಅನುಭವವನ್ನು ಪತ್ರಿಕೆಯೊಂದರೊಂದಿಗೆ ಹೀಗೆ ಹಂಚಿಕೊಂಡಿದ್ದಾರೆ.

“ನನ್ನ ಸ್ನೇಹಿತರು ಹಾಗೂ ನಾನು ಹೊಸ ವರ್ಷವನ್ನು ಸ್ವಾಗತಿಸಲು ಹಲವು ಯೋಜನೆಗಳನ್ನು  ಹಾಕಿಕೊಂಡಿದ್ದೆವು. ಒಂದು ಮೋಜಿನ ಹಾಗೂ ಆನಂದಭರಿತ ಸಂಜೆಯನ್ನು ನಾವು ಜತೆಯಾಗಿ ಕಳೆಯಬಹುದೆಂದು ನಾನು ನಿರೀಕ್ಷಿಸಿದ್ದೆ. ಆದರೆ ಅದೊಂದು ದುಃಸ್ವಪ್ನವಾಗಿ ನನಗೆ ಅಳಿಸಲಾಗದ ಗಾಯ ಮಾಡಿ ಬಿಟ್ಟಿತ್ತು. ನನ್ನ ಸ್ನೇಹಿತರು ನನ್ನನ್ನು ರಕ್ಷಿಸಲು ಯತ್ನಿಸಿದರೂ ಅದು ನಡೆದು ಹೋಯಿತು. ನನಗೆ ಅದೆಷ್ಟು ಸಿಟ್ಟು ಬಂದಿತ್ತೆಂದರೆ, ನನಗೆ ಈ ರೀತಿ ಮಾಡಿದವರ ವಿರುದ್ಧ ನಾನು ಸೆಟೆದು ನಿಲ್ಲಬಹುದಾಗಿತ್ತು. ಆದರೆ ಆತ ಒಬ್ಬನಾಗಿರಲಿಲ್ಲ, ಅದೊಂದು ಗುಂಪು ಆಗಿತ್ತು. ನಾನು ಹಾಗೂ ನನ್ನ ಗೆಳೆಯರು ರಾತ್ರಿ 8 ಗಂಟೆಯ ಹೊತ್ತಿಗೆ ಎಂ ಜಿ ರಸ್ತೆಗೆ ಬಂದಿದ್ದೆವು. ಸ್ವಲ್ಪ ಹೊತ್ತು ಅತ್ತಿತ್ತ ನಡೆದಾಡಿದ ಬಳಿಕ ನಾವು ಪಬ್ ಒಂದಕ್ಕೆ ಹೋಗಿ ಸ್ವಲ್ಪ ರಿಲ್ಯಾಕ್ಸ್ ಆಗಲು ನಿರ್ಧರಿಸಿದೆವು.

“ಆಗ ಅಲ್ಲಿ ಎಲ್ಲವೂ ಸಹಜವಾಗಿತ್ತು ಹಾಗೂ ಎಲ್ಲೆಡೆ ಸಂತಸದ ವಾತಾವರಣವಿತ್ತು. 11 ಗಂಟೆ ಸುಮಾರಿಗೆ ನಾವು ಪಬ್ಬಿನಿಂದ ಹೊರ ಬಂದು ಮನೆಗೆ ಹಿಂದಿರುಗಲು ನಿರ್ಧರಿಸಿದೆವು. ಅಷ್ಟೊತ್ತಿಗೆ ರಸ್ತೆ ತುಂಬೆಲ್ಲಾ ಜನರಿದ್ದರು. ನಾವು ಮೆಟ್ರೋ ಸ್ಟೇಶನಿನತ್ತ ನಡೆಯಲು ಆರಂಭಿಸಿದೆವು. ರಸ್ತೆಯ ಒಂದು ಪಕ್ಕ ಬ್ಯಾರಿಕೇಡುಗಳಿದ್ದವು. ಕೆಲ ಹುಡುಗಿಯರಿಗೇನೋ ಕೆಟ್ಟದ್ದು ನಡೆದಿದೆ ಆ ಕಡೆ ಹೋಗಬೇಡಿ ಎಂದು ಕೆಲ ಜನರು ನಮಗೆ ಹೇಳಿದರು. ಅವರ ಸಲಹೆಗೆ ನಾನು ಪ್ರತಿಕ್ರಿಯಿಸುವ ಮೊದಲೇ ಗುಂಪೊಂದು ನಮ್ಮನ್ನು ನೂಕಿಬಿಟ್ಟಿತ್ತು. ನನ್ನ ಸ್ನೇಹಿತರು ನನ್ನನ್ನು ಎಲ್ಲಾ ಕಡೆಗಳಿಂದ ಸುತ್ತುವರಿದು ರಕ್ಷಿಸಲು ಯತ್ನಿಸಿರೂ, ನನಗೆ ಲೈಂಗಿಕ ಕಿರುಕುಳ ನೀಡಲಾಯಿತು.

“ಅಲ್ಲಿದ್ದ ಜನಜಂಗುಳಿಯಲ್ಲಿ ಒಬ್ಬ ವ್ಯಕ್ತಿಯನ್ನು ಹಿಡಿಯುವುದು ಕಷ್ಟವಾಗಿತ್ತು. ನನ್ನಂತಹ ಪರಿಸ್ಥಿತಿಯಲ್ಲಿಯೇ ಅಲ್ಲಿ ಹಲವಾರು ಯುವತಿಯರಿದ್ದರು. ಕೆಲವರು ಅಳುತ್ತಿರುವುದನ್ನು ಹಾಗೂ ಸಹಾಯ ಯಾಚಿಸಿ ಓಡುತ್ತಿರುವುದನ್ನು ನಾನು ನೋಡಿದೆ. ಆದರೆ ಅದು ಪ್ರಯೋಜನವಿಲ್ಲವೆನಿಸಿತ್ತು. ಅಲ್ಲಿದ್ದ ಜನಜಂಗುಳಿಯನ್ನು ಗಮನಿಸಿದಾಗ ಅಲ್ಲಿದ್ದ ಪೊಲೀಸರ ಸಂಖ್ಯೆ ಕಡಿಮೆಯಾಗಿತ್ತು – 20-25 ಮಂದಿಗೆ ಒಬ್ಬರು. ಅಲ್ಲಿ ಸಂತಸವಿರಲಿಲ್ಲ, ಯುವತಿಯರು ಒಂದೋ ಆತಂಕಗೊಂಡಿದ್ದರು ಇಲ್ಲವೇ ಭಯಗೊಂಡಿದ್ದರು. ಅದೊಂದು ಸಾಮೂಹಿಕ ಲೈಂಗಿಕ ಕಿರುಕುಳವಾಗಿತ್ತು. ಪೊಲೀಸರು ಈ ಪರಿಸ್ಥಿತಿಯನ್ನು ಇನ್ನೂ ಚೆನ್ನಾಗಿ ನಿಭಾಯಿಸಬಹುದಗಿತ್ತು ಎಂದು ನನಗನಿಸಿತ್ತು.

“ಭವಿಷ್ಯದಲ್ಲಿ ಇಂಹ ಸನ್ನಿವೇಶಗಳನ್ನು ನಿಭಾಯಿಸಲು ಸಿದ್ಧರಾಗಿರಬೇಕೆಂದು ನಾನು ಪೊಲೀಸರಲ್ಲಿ ವಿನಂತಿಸುತ್ತೇನೆ. ನಿಮಗೆ ಸೀಸಿಟೀವಿ ದೃಶ್ಯಾವಳಿಗಳು ದೊರಕಿದರೆ ಈ ವ್ಯಕ್ತಿಗಳನ್ನು ಹಿಡಿದು ಇಂತಹ ಭಯಾನಕ ಅನುಭವಕ್ಕೊಳಗಾದ ನನ್ನಂತಹ ಯುವತಿಯರಿಗೆ ನ್ಯಾಯ ಒದಗಿಸಿ.

“ಅಲ್ಲಿದ್ದ ಪುರುಷರಂತೆಯೇ ನಾನು ಕೂಡ ನನ್ನ ಸ್ನೇಹಿತರೊಂದಿಗೆ ಹೊಸ ವರ್ಷವನ್ನು ಆಚರಿಸಬೇಕೆಂದಿದ್ದ  ಸಾಮಾನ್ಯ ಯುವತಿ. ಹುಡುಗಿಯರು ಇಂತಹ ಸ್ಥಳಗಳಿಗೆ ಹೋಗಬಾರದೆಂದು ಅವರು ನನಗೆ ಹೇಳಿದರು. ಹಾಗಾದರೆ ಇಂತಹ ದಿನಗಳು ನಮಗೆ ಯಾವತ್ತೂ ಸುರಕ್ಷಿತವಾಗಿರುವುದಿಲ್ಲವೇ ?

“ನಾನು ಯಾವುದೇ ತಪ್ಪು ಮಾಡಿಲ್ಲವೆಂದು ನಂಬಿರುವುದರಿಂದ ನಾನು ನನ್ನ ಗುರುತನ್ನು ಬಹಿರಂಗಪಡಿಸಲು ಒಪ್ಪಿದೆ. ನನಗೆ ಆಘಾತವಾಗಿತ್ತು. ನಾನೊಂದು ಸಾರ್ವಜನಿಕ ಆಸ್ತಿಯೆಂಬಂತೆ ಯಾರೋ ನನ್ನನ್ನು ಮುಟ್ಟಿ ಅಲ್ಲಿಂದ ಹಾಗೆಯೇ ಹೇಗೆ ಹೊರಟು ಹೋಗಬಹುದೇನು ? ಯಾರಾದರೂ ಇತ್ತ ಗಮನ ಹರಿಸಬೇಕಾದರೆ ಅದು ಅತ್ಯಾಚಾರವೇ ಆಗಬೇಕೇನು ? ಅಲ್ಲಿ ಕಿರುಕುಳಕ್ಕೊಳಗಾದ ಎಲ್ಲಾ ಯುವತಿಯರೂ ತಮಗಾದ ಅನ್ಯಾಯದ ವಿರುದ್ಧ ದನಿಯೆತ್ತಬೇಕೆಂದು ನಾನು ಬಯಸುತ್ತೇನೆ.