ಯುವತಿ ಶವ ಕಾಡಿನ ಬಳಿ ಸುಟ್ಟ ಸ್ಥಿತಿಯಲ್ಲಿ ಪತ್ತೆ, ಸಾವಿನಲ್ಲಿ ಶಂಕೆ

ನಮ್ಮ ಪ್ರತಿನಿಧಿ ವರದಿ

ಕಾಸರಗೋಡು : ಯುವತಿಯ ಶವ ಸುಟ್ಟುಕರಕಲಾದ ಸ್ಥಿತಿಯಲ್ಲಿ ಕಾಡಿನ ಬಳಿ ಪತ್ತೆಯಾಗಿದೆ. ಸಾವಿನಲ್ಲಿ ನಿಗೂಢತೆ ಕಂಡುಬಂದ ಹಿನ್ನೆಲೆಯಲ್ಲಿ ಶವವನ್ನು ಪೆರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ನಾಟೆಕಲ್ಲಿನ ಬಾಡಿಗೆ ಮನೆಯಲ್ಲಿ ವಾಸಿಸುವ ಮಹಾಲಿಂಗ ನಾಯ್ಕ ಎಂಬವರ ಪತ್ನಿ ನಿರ್ಮಲಾ(35)ರ ಮೃತದೇಹ ಸುಟ್ಟುಕರಕಲಾದ ಸ್ಥಿತಿಯಲ್ಲಿ ಕಂಡುಬಂದಿದೆ. ಶವ ಪತ್ತೆಯಾದ ಸ್ಥಳದ ಸಮೀಪದಲ್ಲಿರುವ ಶೇಖರ ಎಂಬವರ ಮನೆಗೆ ನಿರ್ಮಲಾ ಬಂದಿದ್ದರು. ಮನೆಯವರಲ್ಲಿ ಶೇಖರನ ಕುರಿತು ನಿರ್ಮಲಾ ವಿಚಾರಿಸಿದ್ದರು. ಶೇಖರ ಮನೆಯಲ್ಲಿಲ್ಲವೆಂದು ತಿಳಿದ ಬಳಿಕ ಮರಳಿದ ನಿರ್ಮಲಾರ ಮೃತದೇಹ ಒಂದು ಗಂಟೆಯೊಳಗೆ ಆ ಮನೆ ಸಮೀಪದ ಕಾಡಿನಲ್ಲಿ ಉರಿದು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.

ನಿರ್ಮಲಾರ ಪತಿ ಮಹಾಲಿಂಗ ನಾಯ್ಕರ ತರವಾಡು ಮನೆ ಬೆಳ್ಳೂರಡ್ಕದಲ್ಲಿದೆ. ಮಹಾಲಿಂಗ ನಾಯ್ಕ ಕೂಲಿ ಕಾರ್ಮಿಕನಾಗಿದ್ದು, ನಿರ್ಮಲಾ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಕಾರ್ಮಿಕೆಯಾಗಿದ್ದರು. ಇವರಿಗೆ ಮೂವರು ಮಕ್ಕಳಿದ್ದಾರೆ.

ನಿರ್ಮಲಾರ ಕುಟುಂಬ ವಾಸಿಸುತ್ತಿದ್ದ ನಾಟೆಕಲ್ಲಿನ ಬಾಡಿಗೆ ಮನೆಯಿಂದ ಮೂರು ಕಿಲೋ ಮೀಟರ್ ದೂರದಲ್ಲಿ ಶವ ಕಂಡುಬಂದಿದೆ. ನಿರ್ಮಲಾರ ಸಾವಿನಲ್ಲಿ ನಿಗೂಢತೆ ಹುಟ್ಟಿಕೊಂಡಿದೆ. ಸಾವಿನ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಸಂಬಂಧಿಕರು ಹಾಗೂ ನಾಗರಿಕರು ಆಗ್ರಹಿಸಿದ್ದಾರೆ.