ರಸ್ತೆಗೆಸೆಯಲ್ಪಟ್ಟ ಯುವತಿ ದಾರುಣ ಸಾವು

 ಛಿದ್ರಗೊಂಡ ದೇಹ, ಮುಂಡದಿಂದ ಬೇರ್ಪಟ್ಟ ರುಂಡ

ಮಂಗಳೂರು : ಅತೀ ವೇಗದಿಂದ ಬಂದ ಲಾರಿಯೊಂದು ಬೈಕಿನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆಸೆಯಲ್ಪಟ್ಟ ಯುವತಿಯ ದೇಹ ಛಿದ್ರ ಛಿದ್ರವಾಗಿ ಅವರು ಸ್ಥಳದಲ್ಲೇ ದಾರುಣ ಸಾವನ್ನಪ್ಪಿದ ದುರಂತ ಕೆಪಿಟಿ ವೃತ್ತದ ಬಳಿ ಬುಧವಾರ ಸಂಜೆ ನಡೆದಿದೆ. ಗುರುಪುರ ನಿವಾಸಿ ಖಮರುನ್ನಿಸಾ (26) ಮೃತ ದುರ್ದೈವಿ. ಸವಾರ ಗುರುಪುರ ನಿವಾಸಿ ನೌಫಾಲ್ (28) ಗಂಭೀರ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ನೌಫಾಲ್ ಅವರು ಖಮರುನ್ನಿಸಾ ಅವರನ್ನು ಬೈಕಲ್ಲಿ ಕುಳ್ಳಿರಿಸಿಕೊಂಡು ಕೆಪಿಟಿ ಕಡೆಯಿಂದ ಕದ್ರಿಯತ್ತ ಹೋಗುತ್ತಿದ್ದರು. ಕೆಪಿಟಿ ಹಳೆ ಪೆಟ್ರೋಲ್ ಪಂಪ್ ಹತ್ತಿರ ತಲುಪುತ್ತಿದ್ದಂತೆ ಹಿಂಭಾಗದಿಂದ ಬಂದ ಲಾರಿ ಇವರ ಬೈಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ನೌಫಾಲ್ ಬೈಕ್ ನಿಯಂತ್ರಣ ಕಳೆದುಕೊಂಡು ಇಬ್ಬರೂ ರಸ್ತೆಗೆಸೆಯಲ್ಪಟ್ಟಿದ್ದಾರೆ. ಅಲ್ಲದೆ ಡಾಮರು ರಸ್ತೆಗೆ ಬಿದ್ದ ಖಮರುನ್ನೀಸಾಳ ದೇಹ ಲಾರಿ ಹಿಂಭಾಗದ ಚಕ್ರದಡಿಗೆ ಸಿಲುಕಿಕೊಂಡಿದ್ದು, ಸುಮಾರು ದೂರದವರೆಗೆ ಎಳೆದುಕೊಂಡು ಹೋಗಿದ್ದು, ಆಕೆ ದೇಹ ಸಂಪೂರ್ಣ ಛಿದ್ರ ಛಿದ್ರವಾಗಿತ್ತು.

ರಸ್ತೆಯುದ್ದಕ್ಕೂ ನೆತ್ತರು ಹರಿದಿತ್ತು. ದೇಹದ ಮಾಂಸದ ಭಾಗಗಳು ಅಲ್ಲಲ್ಲಿ ಬಿದ್ದಿತ್ತು. ತಲೆ ದೇಹದಿಂದ ಸಂಪೂರ್ಣ ಬೇರ್ಪಟ್ಟಿತ್ತು. ತೊಡೆ, ಕಾಲುಗಂಟಿನ ಭಾಗ  ದೇಹದಿಂದ ಪ್ರತ್ಯೇಕಿಸಲ್ಪಟ್ಟಿತ್ತು.

ನೌಫಾಲ್ ಅವರು ವೃತ್ತಿಯಲ್ಲಿ ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂದರ್ಭ ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಟ್ರಾಫಿಕ್ ಜಾಂ ಉಂಟಾಗಿತ್ತು.