ನಿಮಗೆ ಗೋವು ರಕ್ಷಿಸಲು ತಿಳಿದಿದೆ, ಮಹಿಳೆಯರನ್ನಲ್ಲ

ರಾಜ್ಯಸಭೆಯಲ್ಲಿ ಜಯಾ ಬಚ್ಚನ್ ವಾಗ್ದಾಳಿ

ನವದೆಹಲಿ :“ನಿಮಗೆ ಗೋವುಗಳನ್ನು ರಕ್ಷಿಸಲು ತಿಳಿದಿದೆ, ಆದರೆ ಮಹಿಳೆಯರನ್ನಲ್ಲ. ಮಹಿಳೆಯರ ಮೇಲೆ ನಡೆಯುತ್ತಿರುವ ಅಪರಾಧಗಳ ಬಗ್ಗೆ ಏನಂತೀರಿ ? ಈ ರೀತಿ ಮಾತನಾಡುವ ನಿಮ್ಮ ಪಕ್ಷದ ಸದಸ್ಯನನ್ನು  ಹೊರಗೆಸೆಯಿರಿ. ಈ ರೀತಿಯಾಗಿ, ಅದು ಕೂಡ ಮಹಿಳೆಯೊಬ್ಬಳ ವಿರುದ್ಧ ಈ ರೀತಿ ಪ್ರತಿಕ್ರಿಯಿಸಲು ಧೈರ್ಯವಾದರೂ ಹೇಗೆ ಬಂತು ?” ಎಂದು ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ರಾಜ್ಯಸಭೆಯಲ್ಲಿ ಬಿಜೆಪಿಯನ್ನು ಗುರಿಯಾಗಿಸಿ ವಾಗ್ದಾಳಿಯನ್ನೇ ನಡೆಸಿಬಿಟ್ಟರು.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತಲೆಗೆ ಬಹುಮಾನ ಘೋಷಿಸಿ ಯುವ ಮೋರ್ಚಾ ನಾಯಕ  ಯೋಗೇಶ್ ವಶ್ರ್ನೆ  ಹೇಳಿಕೆ ನೀಡಿರುವುದೇ ಜಯಾ ಬಚ್ಚನ್ ಕೆಂಡಾಮಂಡಲವಾಗಿ ಮೇಲಿನಂತೆ ಪ್ರತಿಕ್ರಿಯಿಸಲು ಕಾರಣ.

ಆದರೆ ಜಯಾ ಬಚ್ಚನ್ ಅವರಿಗೆ ತಿರುಗೇಟು ನೀಡಿದ ಬಿಜೆಪಿ ಸಂಸದೆ ರೂಪಾ ಗಾಂಗೂಲಿ, “ನಾನು ಕೂಡ ಒಬ್ಬಳು ಮಹಿಳೆ. ನನ್ನನ್ನು ಕೂಡ  70 ಮಂದಿ ಪೊಲೀಸರೆದುರೇ  ಹಲ್ಲೆ ನಡೆಸಿದ್ದಾರೆ.  ನನ್ನ ಮೇಲೆ  ಹಲ್ಲೆ ನಡೆಸಿದ ಗೂಂಡಾಗಳು  ಮುಖ್ಯಮಂತ್ರಿಯಾಗಿರುವ ಮಹಿಳೆಯೊಬ್ಬರ ನೇತೃತ್ವದಲ್ಲಿರುವ ಪಕ್ಷವೊಂದಕ್ಕೆ   ಸೇರಿದವರಾಗಿದ್ದಾರೆ, ಇದಕ್ಕೆ ಅವರು ಉತ್ತರ ನೀಡಲಿ” ಎಂದುಬಿಟ್ಟರು.

ಆದರೆ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ  ಮಾತ್ರ ಈ ವಿವಾದದಿಂದ ದೂರ ಸರಿಯಲೆತ್ನಿಸಿದ್ದು “ಬಿಜೆಪಿ ಯುವ ನಾಯಕನ ಹೇಳಿಕೆಯನ್ನು ಖಂಡಿಸುತ್ತೇನೆ. ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಳ್ಳಬಹುದು” ಎಂದರು.