ನೀರಿನ ಬವಣೆ ಹಿಂದೆ ಪಿತೂರಿ : ಯೋಗೀಶ್ ಭಟ್ ಸಂಶಯ

ಮಂಗಳೂರು : ನಗರದಲ್ಲಿ ಎದುರಾಗಿರುವ ಕುಡಿಯುವ ನೀರಿನ ಸಂಕಷ್ಟದ ಹಿಂದೆ ಏನೋ ಪಿತೂರಿ ನಡೆದಿದೆ ಎಂದು ಮಾಜಿ ಶಾಸಕ ಎನ್ ಯೋಗೀಶ್ ಭಟ್ ಸಂಶಯ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾ ಡುತ್ತಿದ್ದ ಯೋಗೀಶ್ ಭಟ್, “ಈ ಕುರಿತು ವರದಿಯನ್ನು ಸಿದ್ದಪಡಿಸಲಾಗಿದ್ದು, ಶೀಘ್ರದಲ್ಲೇ ಅದನ್ನು ಜಿಲ್ಲಾಧಿಕಾರಿ ಡಾ ಕೆ ಜಿ ಜಗದೀಶ್ ಅವರಿಗೆ ಸಲ್ಲಿಸುತ್ತೇನೆ” ಎಂದು ತಿಳಿಸಿದ್ದಾರೆ. ಈ ವರದಿಯು ಲಭ್ಯವಿರುವ ನೀರಿನ ತುಲನಾತ್ಮಕ ಮತ್ತು ನೀರಿನ ಹಂಚಿಕೆ ಜಾಲದ ವಿವರಗಳನ್ನು ಒಳಗೊಂಡಿದೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ಭಟ್ ತುಂಬೆ ವೆಂಟೆಡ್ ಡ್ಯಾಮಿಗೆ ಭೇಟಿ ನೀಡಿದ್ದು, ನೀರಿನ ಲಭ್ಯತೆಯನ್ನು ಪರಿಶೀಲಿಸಿದ್ದಾರೆ. ಹೊಸ ಅಣೆಕಟ್ಟು ನೀರಿನ ಸಂಗ್ರಹ ಸಾಮಥ್ರ್ಯವನ್ನು ಹೆಚ್ಚಿಸಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಅಣೆಕಟ್ಟಿಗೆ ಸಾಕಷ್ಟು ಪ್ರಮಾಣದ ನೀರಿನ ಒಳಹರಿವು ಕಂಡುಬಂದಿದೆ. ಲಭ್ಯವಿರುವ ನೀರು ಮೇ ಅಂತ್ಯದವರೆಗೆ ನಗರದ ಜನರ ನೀರಿನ ಬೇಡಿಕೆಯನ್ನು ಪೂರೈಸಬಹುದು. ಇನ್ನೊಂದೆಡೆಯಲ್ಲಿ ನೀರಿನ ಕೊರತೆ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲು ಮನಪಾ ಹಲವು ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಬಾವಿಗಳ ಸಮೀಪದಲ್ಲಿರುವ ಮ್ಯಾನಹೋಲ್‍ಗಳನ್ನು ಮುಚ್ಚಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಭಟ್ ಹೇಳಿದ್ದಾರೆ.