ಮದರಸಗಳ ಮುಚ್ಚಿಸಲು ಯೋಗಿ ಕಾರ್ಯಾಚರಣೆ

ಮದರಸಗಳಿಗೆ ಸೂಕ್ತ ಕಟ್ಟಡ, ಮೂಲಭೂತ ಸೌಕರ್ಯ ಹಾಗೂ ಸಾಕಷ್ಟು ಶಿಕ್ಷಕರಿಲ್ಲ ಎಂದು ನೆರವು ರದ್ಧತಿಗೆ ಸರ್ಕಾರ ಸಾಮಾನ್ಯ ಕಾರಣ ನೀಡಿದೆ.

ಲಕ್ನೋ : ಕೇಂದ್ರದಲ್ಲಿ 2014ರಲ್ಲಿ ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಮದರಸಗಳ ಆಧುನೀಕರಣಕ್ಕೆ ಪ್ರಾಥಮಿಕ ಆದ್ಯತೆ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಸರ್ಕಾರ ಮಾತ್ರ ಮದರಸಗಳ ಮುಚ್ಚುವ ಕೆಲಸ ಮಾಡುತ್ತಿದೆ !

ರಾಜ್ಯದಲ್ಲಿ ಮದರಸಗಳು ಭಯೋತ್ಪಾದಕರ ಕಾರ್ಖಾನೆಯಂತೆ ಕಾರ್ಯವೆಸಗುತ್ತಿವೆ ಎಂದು ಸಂಘ-ಪರಿವಾರದ ಮುಖಂಡರೊಬ್ಬರು ಆರೋಪಿಸಿದ್ದಾರೆ. ವಿಶೇಷತಃ ಉತ್ತರ ಪ್ರದೇಶದ ಅಜಂಘಡ ಮತ್ತು ಆಸುಪಾಸಿನ ಪ್ರದೇಶಗಳ ಮದರಸಗಳಲ್ಲಿ ಭಯೋತ್ಪಾದನೆಗೆ ಉತ್ತೇಜನ ನೀಡುವಂತಹ ಚಟುವಟಿಕೆ ನಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಈ ಆರೋಪಗಳ ಪುನರ್ ಪರಿಶೀಲನೆ ನಡೆಸುವಷ್ಟು ವ್ಯವಧಾನ ತೋರಿಸದ ಯೋಗಿ ಸರ್ಕಾರ ಸದ್ಯ ಮದರಸಗಳ ವಿರುದ್ಧ ಅಭಿಯಾನ ಆರಂಭಿಸಿದೆ.

ಉತ್ತರ ಪ್ರದೇಶದಲ್ಲಿ ಸರ್ಕಾರಿ ನೆರವು ಪಡೆಯುತ್ತಿರುವ 560 ಸರ್ಕಾರಿ ಮದರಸಗಳ ವಿರುದ್ಧ ಮೂರು ತಿಂಗಳ ಹಿಂದೆ ಸರ್ಕಾರಿ ವಿಚಾರಣೆ ಆರಂಭವಾಗಿದ್ದು, ಈಗಾಗಲೇ 46 ಮದರಸಗಳ ನೆರವು ರದ್ದಾಗಿದೆ. ಸರ್ಕಾರ ನಿಗದಿಪಡಿಸಿರುವ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಈ ಮದರಸಗಳು ಹಿಂದೆ ಬಿದ್ದಿವೆ. ಮದರಸಗಳಿಗೆ ಸೂಕ್ತ ಕಟ್ಟಡ, ಮೂಲಭೂತ ಸೌಕರ್ಯ ಹಾಗೂ ಸಾಕಷ್ಟು ಶಿಕ್ಷಕರಿಲ್ಲ ಎಂದು ನೆರವು ರದ್ಧತಿಗೆ ಸರ್ಕಾರ ಸಾಮಾನ್ಯ ಕಾರಣ ನೀಡಿದೆ ಎಂದು ಮುಸ್ಲಿಂ ಮುಖಂಡರು ದೂರಿದ್ದಾರೆ.

ಮದರಸಗಳ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸುತ್ತಿರುವ ಉತ್ತರ ಪ್ರದೇಶ ಸರ್ಕಾರ, “ನಮ್ಮ ಮೇಲೆ ಧಾರ್ಮಿಕ ಕಟ್ಟರ್ ಪಂಥೀಯ ಆರೋಪ ಹೊರಿಸಲು ಪ್ರಯತ್ನಿಸುತ್ತಿದೆ. ರಾಜ್ಯದ ಸಾವಿರಾರು ಮದರಸಗಳು ಆಧುನಿಕ ಶಾಲೆಗಳೊಂದಿಗೆ ಸ್ಪರ್ಧೆ ನಡೆಸುವಂತಹ ಗುಣಮಟ್ಟ ಹೊಂದಿವೆ. ಮೂಲಭೂತ ಸೌಕರ್ಯಗಳ ವಿಷಯ ಮಾತಾಡುವುದಾದರೆ, ಸರ್ಕಾರಿ ಶಾಲೆಗಳ ಸ್ಥಿತಿಗಿಂತ ಮದರಸಗಳು ಎಷ್ಟೋ ಪಾಲು ಉತ್ತಮವಾಗಿವೆ. ದುಃಸ್ಥಿತಿಯಲ್ಲಿರುವ ಸರ್ಕಾರಿ ಮುಚ್ಚದೆ, ಮದರಸಗಳ ಮೇಲೆಯೇ ಗೂಬೆ ಕೂರಿಸಲಾಗುತ್ತಿದೆ” ಎಂದು ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.