`ಹಣ ಕಬಳಿಸಲು ಎತ್ತಿನಹೊಳೆ ಯೋಜನೆ’

ಕೋಟಾ ಶ್ರೀನಿವಾಸ ಪೂಜಾರಿ ಆರೋಪ

ನಮ್ಮ ಪ್ರತಿನಿಧಿ ವರದಿ

ಉಪ್ಪಿನಂಗಡಿ : “ದ ಕ ಜಿಲ್ಲೆಯ ಜನರ ಆಕ್ಷೇಪವಿದ್ದಾಗ್ಯೂ, ಜಿಲ್ಲೆಯ ಹಿತಕ್ಕೆ ಮಾರಕವಾದ ಎತ್ತಿನಹೊಳೆ ಯೋಜನೆಯನ್ನು 13,500 ಕೋಟಿ ರೂ ವೆಚ್ಚದಲ್ಲಿ ಅನುಷ್ಠಾನಿಸಲು ಸರಕಾರ ಮುಂದಾಗಿರುವುದು ಖಂಡನೀಯ. ಹಣ ಕಬಳಿಸುವ ಉದ್ದೇಶದಿಂದ ಜಾರಿಗೆ ತರುತ್ತಿರುವ ಈ ಯೋಜನೆಯನ್ನು ತಡೆಗಟ್ಟಲು ಜಿಲ್ಲೆಯ ಜನರ ದ್ವನಿ ಇನ್ನಷ್ಟು ಪ್ರಬಲವಾಗಬೇಕಾಗಿದೆ” ಎಂದು ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಪ್ರತಿಪಾದಿಸಿದರು.

ಅವರು ಶನಿವಾರದಂದು ನೆಲ್ಯಾಡಿಗೆ ಆಗಮಿಸಿದ ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದ ಪಂಚತೀರ್ಥ ಸಪ್ತ ಕ್ಷೇತ್ರ ರಥಯಾತ್ರೆಯ ಅಂಗವಾಗಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

“ಎತ್ತಿನೊಳೆ ಯೋಜನೆಯ ಬಗ್ಗೆ ಕರಾವಳಿಯ ಜನ ವಿರೋಧಿಸುತ್ತಲೇ ಇದ್ದರೂ ಯೋಜನೆಗೆ 13,500 ಕೋಟಿ ರೂ ಟೆಂಡರ್ ಆಗಿದೆ. ಈ ಪೈಕಿ 1850 ಕೋಟಿ ರೂ ಗುತ್ತಿಗೆದಾರರ ಕೈ ಸೇರಿಯಾಗಿದೆ. ಯೋಜನೆಗಾಗಿ ತಂದು ಹಾಕಿರುವ ಪೈಪುಗಳು ತುಕ್ಕು ಹಿಡಿಯುತ್ತಿವೆ. ಯೋಜನೆಗೆ ಸಂಬಂಧಿಸಿದಂತೆ ಸಂಪುಟದ ಮೂವರು ಸಚಿವರಿಗೆ 50ರಿಂದ 150 ಕೋಟಿ ರೂ ಕಿಕ್ ಬ್ಯಾಕ್ ಸಂದಾಯವಾಗಿದೆ. ಇದರಲ್ಲಿ ವಿಧಾನಪರಿಷತ್‍ನ ಸದಸ್ಯರೊಬ್ಬರ ಪುತ್ರನ ಕೈವಾಡವೂ ಇದೆ ಎಂದು ಟಿವಿ ಮಾಧ್ಯಮವೊಂದರಲ್ಲಿ ವರದಿ ಪ್ರಕಟಗೊಂಡಿದೆ” ಎಂದು ವಿವರಿಸಿದ ಅವರು,  ರಾಜ್ಯ ಸರಕಾರ ಈ ಬಗ್ಗೆ ತನಿಖಾ ಆಯೋಗ ರಚಿಸಿ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಎತ್ತಿನಹೊಳೆ ಯೋಜನೆಯನ್ನು `ಎಮ್ಮೆಹೊಳೆ’ ಎಂದು ವ್ಯಾಖ್ಯಾನಿಸಿದ ಕೋಟಾ ಶ್ರೀನಿವಾಸ ಪೂಜಾರಿ, ಯೋಜನೆಯಿಂದ ಗುತ್ತಿಗೆದಾರರಿಗೆ, ಸಚಿವರಿಗೆ ಮೇಯಲು ಬೇಕಾದ ವಾತಾವರಣ ಸೃಷ್ಟಿಯಾಗಿದೆ ಎಂದು ಟೀಕಿಸಿದರು.  ಈ ಯೋಜನೆಯಿಂದ ಬೌಗೋಳೀಕ ಸ್ಥಿತಿಗತಿ ವ್ಯತ್ಯಯವಾಗಲಿದ್ದು, ಹೊಸ ಸಮಸ್ಯೆ ಸೃಷ್ಟಿಯಾಗಿ ಜಿಲ್ಲೆಯ ಜನರ ಬದುಕು ದುರಂತವಾಗಲಿದೆ. ಯೋಜನೆ ತಕ್ಷಣ ನಿಲ್ಲಿಸಬೇಕು. ಸಚಿವರಾದ ರಮಾನಾಥ ರೈ, ಖಾದರ್, ವಿಧಾನ ಪರಿಷ್ ಸದಸ್ಯ ಐವನ್ ಡಿಸೋಜರವರು ಎತ್ತಿನಹೊಳೆ ಯೋಜನೆ ಬೇಡ ಎಂದು ವಿಧಾನಸಭೆಯಲ್ಲಿಯೇ ಹೇಳಬೇಕು” ಎಂದು ಅವರು ಹೇಳಿದರು.

ರಥಯಾತ್ರೆ ನಿರ್ವಾಹಕರಾದ ಎಂ ಜಿ ಹೆಗಡೆ ಮಾತನಾಡಿ, “ಪಂಚತೀರ್ಥ ಸಪ್ತಕ್ಷೇತ್ರ ರಥಯಾತ್ರೆ ಜೀವನದಿ ನೇತ್ರಾವತಿ ಉಳಿವಿಗಾಗಿ ನಡೆಯುತ್ತಿರುವ ಚಳುವಳಿಯಾಗಿದೆ. ಈ ಹೋರಾಟದಲ್ಲಿ ರಾಜಕೀಯ ಇಲ್ಲ. ಹಿಂದೂ, ಮುಸ್ಲಿಂ, ಕ್ರೈಸ್ತರು ಹೋರಾಟಕ್ಕೆ ಬೆಂಬಲ ಘೋಷಿಸಿದ್ದಾರೆ. ನೇತ್ರಾವತಿ ನದಿ ನೀರು ಕುಡಿಯುವವರು ಈ ಚಳುವಳಿಯಲ್ಲಿ ಪಾಲ್ಗೊಳ್ಳಬೇಕು” ಎಂದು ಹೇಳಿದರು.

“ಎತ್ತಿನಹೊಳೆ ಯೋಜನೆ ವಿರೋಧಿಸಿ 3 ವರ್ಷದಿಂದ ಕರಾವಳಿಯ ಜನತೆ ಹೋರಾಟ ನಡೆಸುತ್ತಿದ್ದಾರೆ. ಆದರೆ ಸರಕಾರ ಇಲ್ಲಿಯತನಕ ಯಾರನ್ನೂ ಮಾತುಕತೆಗೆ ಕರೆದಿಲ್ಲ. ಕರಾವಳಿಯ ಜನರನ್ನು ಸರಕಾರ ನಿರ್ಲಕ್ಷಿಸುತ್ತಿದೆ. ಆದ್ದರಿಂದ ಇದೊಂದು ಕೇವಲ ನೇತ್ರಾವತಿ ನದಿ ಉಳಿವಿಗಾಗಿ ನಡೆಯುವ ಹೋರಾಟವಲ್ಲ, ಕರಾವಳಿಯ ಜನರ ಬದುಕು, ಅಸ್ತಿತ್ವಕ್ಕಾಗಿ ನಡೆಯುವ ಹೋರಾಟವಾಗಿದೆ” ಎಂದರು.

“ಎತ್ತಿನಹೊಳೆ ಯೋಜನೆ ವಿರೋಧಿಸಿ ನಡೆಯುತ್ತಿರುವ ಹೋರಾಟದಲ್ಲಿ ಜಿಲ್ಲೆಯ ಎಲ್ಲಾ ಜನರು ಇದ್ದಾರೆ. ಆದರೆ ಸಚಿವರಾದ ರಮಾನಾಥ ರೈ, ಖಾದರ್ ಜೊತೆಗಿಲ್ಲ. ಇವರಿಬ್ಬರು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ  ಮಾತುಕತೆಗೆ ಅಡ್ಡಗೋಡೆಯಾಗಿದ್ದಾರೆ. ಈ ಹೋರಾಟ ಪಕ್ಷ, ವ್ಯಕ್ತಿ ವಿರುದ್ಧವಲ್ಲ. ಕರಾವಳಿಯ ಜನರ ಸ್ವಾಭಿಮಾನಕ್ಕೆ ಧಕ್ಕೆ ಉಂಟು ಮಾಡಿದಲ್ಲಿ ರಾಜಕೀಯ ಶಕ್ತಿಗಳ ದಿಕ್ಕು ಬದಲಿಸುತ್ತೇವೆ ಎಂದು ಹೆಗಡೆ ಹೇಳಿದರು. ನೆಲ್ಯಾಡಿಯಲ್ಲಿ ರಥಕ್ಕೆ ಸ್ವಾಗತ ಸಮಿತಿ ಗೌರವಾಧ್ಯಕ್ಷ, ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆ ಸಂಚಾಲಕ ಅಬ್ರಹಾಂ ವರ್ಗೀಸ್, ಅಧ್ಯಕ್ಷ ಬಾಲಕೃಷ್ಣ ಬಾಣಜಾಲು ಸೇರಿದಂತೆ ಹಲವು ಮಂದಿ ಹಾರಾರ್ಪಣೆ ಮಾಡಿ ಸ್ವಾಗತಿಸಿದರು.

ರಥಯಾತ್ರೆ ಸಮಿತಿಯ ಗೌರವಾಧ್ಯಕ್ಷ, ಸಂಸದ ನಳಿನಕುಮಾರ್ ಕಟೀಲ್, ಕಾರ್ಯಾಧ್ಯಕ್ಷ ವಿಧಾನಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ಸಹಸಂಚಾಲಕ ದಿನಕರ ಶೆಟ್ಟಿ, ಸಂಚಾಲಕ ಕೆ ಮೋನಪ್ಪ ಭಂಡಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.