ಎತ್ತಿನಹೊಳೆ ಯೋಜನೆ ಆರ್ಥಿಕವಾಗಿ ಕಾರ್ಯಸಾಧ್ಯವಲ್ಲ : ಜಿ ವಿ ಜೋಶಿ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನೇತ್ರಾವತಿ ನದಿ ತಿರುಗಿಸುವ ಎತ್ತಿನಹೊಳೆ ಯೋಜನೆಯು ಆರ್ಥಿಕವಾಗಿ ಕಾರ್ಯಸಾಧ್ಯವಲ್ಲ ಎಂದು ಖ್ಯಾತ ಆರ್ಥಿಕ ತಜ್ಞ, ಚಿಂತಕ ಬಿ ವಿ ಜೋಷಿ ಹೇಳಿದ್ದಾರೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮಾರೇನಹಳ್ಳಿಯಲ್ಲಿ ಕೈಗೆತ್ತಿಕೊಂಡಿರುವ ಈ ಯೋಜನೆ ಕೇವಲ ಸ್ಥಳೀಯ ಜನರ ಹೊಡೆದಾಟಕ್ಕೆ, ವಿವಾದಗಳಿಗೆ ಕಾರಣವಾಗಿದೆಯೇ ವಿನಃ ಇದರಿಂದ ಏನೂ ಪ್ರಯೋಜನವಿಲ್ಲ ಎಂದಿದ್ದಾರೆ. ಕಾರ್ಯಸಾಧುವಲ್ಲದ ಯೋಜನೆಗಳಿಂದ ಅಭಿವೃದ್ಧಿ ಹೆಸರಿನಲ್ಲಿ ಭೌಗೋಳಿಕವಾಗಿ ದುಷ್ಪರಿಣಾಮಗಳೇ ಹೆಚ್ಚು ಎಂದವರು ಅಭಿಪ್ರಾಯಪಟ್ಟಿದ್ದಾರೆ.

`ಅಭಿವೃದ್ಧಿಗಾಗಿ ಸವಾಲುಗಳು ಮತ್ತು ಹೋರಾಟಗಳು : ಪ್ರಾದೇಶಿಕ ಸಂದರ್ಭಗಳಲ್ಲಿ ಆಡಳಿತ ಮತ್ತು ನಿರ್ವಹಣೆಯ ವಿಷಯ’ ಎನ್ನುವ ವಿಚಾರದಲ್ಲಿ ಬರೆದ ತನ್ನ ಕಿರುಪುಸ್ತಿಕೆಯ ವಿಮರ್ಶೆ ಮಾಡುತ್ತಾ ಅವರು ಮಾತನಾಡುತ್ತಿದ್ದರು.

ರಾಜಕೀಯವಾಗಿ ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ಪರಿಸರದ ನೆಪದಲ್ಲಿ ಹೋರಾಟಗಳಿಗೆ ಕಾರಣವಾಗುತ್ತಿದೆ. ಆದರೆ ಈ ಹೋರಾಟಗಳು ಪರಿಸರಕ್ಕೆ ಯಾವುದೇ ರೀತಿಯಲ್ಲಿ ಪೂರಕವಾಗಿರುವುದಿಲ್ಲ ಎಂದು ಜೋಷಿ ಹೇಳಿದ್ದಾರೆ. ಈಗಾಗಲೇ ಆಡಳಿತ ಮತ್ತು ನಿರ್ವಹಣೆ ಸಮಸ್ಯೆಗಳು ವಿವಿಧ ರಂಗಗಳಲ್ಲಿ ಅಭಿವೃದ್ಧಿ ವಿಚಾರದಲ್ಲಿ ಹೋರಾಟಗಳು ಮತ್ತು ಸಮಸ್ಯೆಗಳನ್ನೇ ಸೃಷ್ಟಿಸಿವೆ ಎಂದರು.

ವಿವಾದಾತ್ಮಕ ಎತ್ತಿನಹೊಳೆ ಯೋಜನೆ ಕಾರ್ಯಸಾಧುವಲ್ಲ ಎಂದು ಈಗಾಗಲೇ ಪರಿಸರ ತಜ್ಞ, ಇಂಡಿಯನ್ ಇನಸ್ಟಿಟ್ಯೂಟ್ ಆಫ್ ಸಾಯನ್ಸಿನ ಟಿ ವಿ ರಾಮಚಂದ್ರನ್ ಆತಂಕ ವ್ಯಕ್ತಪಡಿಸಿದ್ದಾರೆ. ಜೋಷಿ ಕೂಡಾ ಈ ಯೋಜನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೇವಲ ಪರಿಸರದ ಮೇಲಷ್ಟೇ ಅಲ್ಲ, ಇದು ಆರ್ಥಿಕವಾಗಿಯೂ ಕಾರ್ಯಸಾಧುವಲ್ಲ ಎಂದು ಅವರು ಹೇಳಿದ್ದಾರೆ.

ಯೋಜನೆಯಿಂದ 24 ಟಿಎಂಸಿ ನೀರು ಲಭ್ಯವಿದೆ ಎನ್ನುವುದು ಕೇವಲ ಮೂರ್ಖತನ. ವರ್ಷದ ಮೂರು ತಿಂಗಳು ಕೇವಲ 6-7 ಟಿಎಂಸಿ ನೀರು ಕೊಂಡು ಹೋಗುವುದಕ್ಕೆ 20,000 ಕೋಟಿ ರೂ ಖರ್ಚು ಮಾಡುವ ಅಗತ್ಯವೇನಿದೆ ಎಂದು ಜೋಷಿ ಪ್ರಶ್ನಿಸಿದ್ದಾರೆ.