ಎತ್ತಿನಹೊಳೆ ಯೋಜನೆ ಸ್ಥಗಿತ ಸಾಧ್ಯವಿಲ್ಲ ಎಂದ ಸಿದ್ದರಾಮಯ್ಯ

ಕಾಟಾಚಾರಕ್ಕೆ ನಡೆದ ಸಭೆ ವಾಗ್ವಾದದಲ್ಲೇ ಅಂತ್ಯ

ಬೆಂಗಳೂರು : ಎತ್ತಿನಹೊಳೆ ಯೋಜನೆ ಕುರಿತಂತೆ ದಕ್ಷಿಣ ಕನ್ನಡ ಜಿಲ್ಲೆಯ ಜನರಲ್ಲಿ ಎದುರಾಗಿರುವ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯುವ ನಿಟ್ಟಿನಲ್ಲಿ ಕೊನೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ಸಭೆ ತೀವ್ರ ವಾಗ್ವಾದ, ಚರ್ಚೆಗಳಿಗೆ ಸೀಮಿತವಾಗಿ ಮುಕ್ತಾಯಗೊಂಡಿದೆ. ಯಾವುದೇ ನಿರ್ದಿಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ.

ರಾಜಕಾರಣಿಗಳು, ಪರಿಸರ ತಜ್ಞರು ಸೇರಿದಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಹೋರಾಟಗಾರರು ಬೆಂಗಳೂರಿನಲ್ಲಿನ ಸೀಎಂ ಗೃಹ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಇದ್ದರು.

ಸಭೆಯಲ್ಲಿನ ಸರಕಾರದ ನಿಲುವು ಮತ್ತು ಮಾತಿನ ವೈಖರಿಯಿಂದ ಆಕ್ರೋಶಗೊಂಡ ಬಿಜೆಪಿ ಸದಸ್ಯರು ಮತ್ತು ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಹೋರಾಟಗಾರರು ಸಭೆಯನ್ನು ಬಹಿಷ್ಕರಿಸಿ ಹೊರನಡೆದರು.

ಯೋಜನಾ ಪ್ರದೇಶದಲ್ಲಿ ಈಗಾಗಲೇ 1800 ಕೋಟಿ ರೂ.ಗಳ ಕಾಮಗಾರಿ ಪೂರ್ಣಗೊಂಡಿದೆ. ಈ ಹಂತದಲ್ಲಿ ಯೋಜನೆಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು. ಇದರಿಂದ ಆಕ್ರೋಶಗೊಂಡ ಯೋಜನಾ ವಿರೋಧಿ ಹೋರಾಟಗಾರರು ಸಭೆಯನ್ನು ಬಹಿಷ್ಕರಿಸಿ ಹೊರನಡೆದರು. ಈ ವೇಳೆ ಸಭೆಯ ಒಳಗೆ ಹಾಗೂ ಹೊರಗೆ ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರು, ಸಚಿವರು, ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆಯಿತು.

“2012ರಲ್ಲಿ ಬಿಜೆಪಿ ಸರಕಾರವು ಈ ಯೋಜನೆಯನ್ನು ಹುಟ್ಟುಹಾಕಿತ್ತು. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಗಳ ಜನರಿಗೆ ಕುಡಿಯುವ ನೀರನ್ನು ಒದಗಿಸುವ 13,000 ಕೋಟಿ ರೂ.ಗಳ ಯೋಜನೆ ಇದಾಗಿದೆ” ಎಂದು ನೀರಾವರಿ ಸಚಿವ ಎಂ ಬಿ ಪಾಟೀಲ್ ಈ ಸಂದರ್ಭ ಹೋರಾಟಗಾರರಿಗೆ ಮತ್ತೊಮ್ಮೆ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, “ಬಿಜೆಪಿಯವರು ಸದನದಲ್ಲಿ ನಿಲುವಳಿ ಮಂಡಿಸಲಿ. ನಾನು ಮುಖ್ಯಮಂತ್ರಿಯ ಕಾಲಿಗೆ ಬಿದ್ದಾದರೂ ಈ ಯೋಜನೆಯನ್ನು ಸ್ಥಗಿತಗೊಳಿಸುತ್ತೇನೆ” ಎಂದರು.