ಎತ್ತಿನಹೊಳೆ : `ಅಪೂರ್ಣ’ ವರದಿ ನೀಡಿದ ಪರಿಸರ ಸಚಿವಾಲಯ, ಮರಗಳ ಮಾರಣ ಹೋಮ ನಡೆಸಿದ ರಾಜ್ಯ ಸರಕಾರಕ್ಕೆ ಬಿಸಿ ಮುಟ್ಟಿಸಿದ ಹಸಿರು ಪ್ರಾಧಿಕಾರ

ವಿಶೇಷ ವರದಿ 

 ಮಂಗಳೂರು : ವಿವಾದಿತ ಎತ್ತಿನಹೊಳೆ  ಯೋಜನೆಗಾಗಿ ಮರಗಳ ನಾಶ ಹಾಗೂ ಈ ಯೋಜನೆಯಿಂದ ಪಶ್ಚಿಮ ಘಟ್ಟಗಳ ಜೀವವೈವಿಧ್ಯತೆಯ ಮೇಲುಂಟಾಗುವ ಪರಿಣಾಮಗಳ ಬಗ್ಗೆ “ಅಪೂರ್ಣ ಹಾಗೂ ಕಳಪೆ” ವರದಿಯನ್ನು ತಯಾರಿಸಿದ್ದಕ್ಕೆ ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯವನ್ನು ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್ ತರಾಟೆಗೆ ತೆಗೆದುಕೊಂಡಿದೆ.

ಪರಿಸರದ ಮೇಲಿನ ಪರಿಣಾಮಗಳನ್ನು ಅಧ್ಯಯನ ನಡೆಸದೆ ಯೋಜನೆಗಾಗಿ  ಮರಗಳನ್ನು ಕಡಿಯಲು ಅನುಮತಿಸಿದ ಕರ್ನಾಟಕ ಸರಕಾರವನ್ನೂ ತರಾಟೆಗೆ ತೆಗೆದುಕೊಂಡಿರುವ ಎನ್ಜಿಟಿ, ಮರಗಳ ನಾಶದ ಹಿನ್ನೆಲೆಯಲ್ಲಿ ಮತ್ತೆ ಮರಗಳನ್ನು ನೆಡಲು ಸರಕಾರ ಕ್ರಮ ಕೈಗೊಂಡಿದೆಯೇ ಹಾಗೂ ಪಶ್ಚಿಮ ಘಟ್ಟಗಳ ಬಗ್ಗೆ ಕಸ್ತೂರಿ ರಂಗನ್ ಹಾಗೂ ಮಾಧವ ಗಾಡ್ಗೀಳ್ ನೇತೃತ್ವದ ಸಮಿತಿಗಳು ನೀಡಿರುವ ಸಲಹೆಗಳನ್ನು ಈ ಯೋಜನೆ ಆರಂಭಿಸುವ ಮುನ್ನ ಪಾಲಿಸಲಾಗಿದೆಯೇ ಎಂದೂ ಪ್ರಶ್ನಿಸಿದೆ.

ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸಿದ ಜಸ್ಟಿಸ್ ಸ್ವತಂತರ್ ಕುಮಾರ್ ನೇತೃತ್ವದ ಟ್ರಿಬ್ಯುನಲ್ಲಿನ ಮುಖ್ಯ ಪೀಠವು ವರದಿ ವಿಸ್ತøತವಾಗಿಲ್ಲ ಹಾಗೂ ಯೋಜನೆಯು ಪರಿಸರದ ಮೇಲೆ ಬೀರಬಹುದಾದ ಪರಿಣಾಮಗಳ ಮೇಲೆ ಬೆಳಕು ಚೆಲ್ಲಿಲ್ಲ ಎಂದು ಹೇಳಿದೆ.

ರಾಜ್ಯ ಸರಕಾರದ ಅಧಿಕಾರಿಗಳು ಹಾಗೂ ಅರ್ಜಿದಾರರನ್ನೊಳಗೊಂಡ ತಂಡವೊಂದನ್ನು ರಚಿಸಿ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಯೋಜನೆಗಾಗಿ ಕಡಿಯಲಾದ ಮರಗಳಿಗೆ ಸಂಬಂಧಿಸಿದಂತೆ ವರದಿ ತಯಾರಿಸುವಂತೆ ಟ್ರಿಬ್ಯುನಲ್ ಈ ಹಿಂದೆ ಸಚಿವಾಲಯಕ್ಕೆ ಹೇಳಿತ್ತು. ಆದರೆ ಶುಕ್ರವಾರ ಸಲ್ಲಿಸಲಾದ ತನ್ನ ವರದಿಯಲ್ಲಿ ಸಚಿವಾಲಯ ತಾನು ಸೂಕ್ತ ಅಧ್ಯಯನ ನಡೆಸದೆ ಯೋಜನೆಗೆ ಅನುಮತಿ ನೀಡಿದ್ದಾಗಿ ಹೇಳಿರುವುದಕ್ಕೆ ತನ್ನ ತೀವ್ರ ಆಶ್ಚರ್ಯ ವ್ಯಕ್ತಪಡಿಸಿದ ಟ್ರಿಬ್ಯೂಬಲ್ ವರದಿಯನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದಿದೆ.

ಇಲ್ಲಿಯತನಕ ಯೋಜನೆಗಾಗಿ ಕೇವಲ 7000 ಮರಗಳನ್ನು ಮಾತ್ರ ಕಡಿದಿರುವುದಾಗಿ ಸರಕಾರದ ಪರ ವಕೀಲರು ಹೇಳಿದಾಗ ಅರ್ಜಿದಾರ ಕೆ ಎನ್ ಸೋಮಶೇಖರ್ ಅವರ ವಕೀಲ ಇದನ್ನು ಅಲ್ಲಗಳೆದು ಕಡಿಯಲೆಂದು ಗುರುತಿಸಲಾಗಿರುವ 4 ಲಕ್ಷ ಮರಗಳಲ್ಲಿ 85,000 ಮರಗಳನ್ನು ಈಗಾಗಲೇ ಕಡಿದುರುಳಿಸಲಾಗಿದೆ ಎಂದರು.

ಮುಂದಿನ ವಿಚಾರಣೆ ಫೆಬ್ರವರಿ 6ರಂದು ನಡೆಯಲಿದೆ.