ದಾರಿ ತಪ್ಪಿದ ಎತ್ತಿನಹೊಳೆ ಹೋರಾಟ

ಸಂಸದ ನಳಿನರೇ, ಎತ್ತಿನಹೊಳೆ ಯೋಜನೆಗೆ ಓಂ ನಾಮ ಹಾಡಿದ ಸದಾನಂದ ಗೌಡ ಮತ್ತು ಯಡಿಯೂರಪ್ಪರನ್ನು ಪಂಚತೀರ್ಥ ರಥಯಾತ್ರೆಗೆ ಯಾಕೆ ಸೇರಿಸಿಲ್ಲ ?

ಎತ್ತಿನಹೊಳೆ ಯೋಜನೆ ವಿರುದ್ಧ ಬಹಳ ಹಿಂದೆ ಆರಂಭವಾಗಿದ್ದ ಹೋರಾಟ ಇದೀಗ ದಾರಿ ತಪ್ಪಿರುವಂತೆ ಭಾಸವಾಗುತ್ತದೆ. ಇದರಲ್ಲಿ ತೊಡಗಿಸಿಕೊಂಡಿರುವ ರಾಜಕಾರಣಿಗಳನ್ನು, ರಾಜಕೀಯ ಸಂಘಟನೆಗಳನ್ನು ನಂಬುವಂತೆಯೇ ಇಲ್ಲ. ಏಕೆಂದರೆ ಈ ಯೋಜನೆಯನ್ನು ಆರಂಭಿಸಿದವರು ಬಿಜೆಪಿ ಪಕ್ಷದವರು. ಯಡಿಯೂರಪ್ಪನವರು ಮಾತ್ರವಲ್ಲ ನಮ್ಮದೇ ಜಿಲ್ಲೆಯ ಸದಾನಂದ ಗೌಡರೂ ಈ ಯೋಜನೆಗೆ ಬೆಂಬಲ ನೀಡಿದವರು. ಆ ಸಂದರ್ಭದಲ್ಲಿ ದ ಕ ಜಿಲ್ಲೆಯ ಬಿಜೆಪಿ ಸಾಂಸದಿಕರಾಗಲೀ ಇತರ ಧುರೀಣರಾಗಲೀ ಸೊಲ್ಲೆತ್ತಲಿಲ್ಲ. ಯಾವಾಗ ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಬಂತೋ, ದ ಕ ಜಿಲ್ಲೆಯ ಬಿಜೆಪಿ ನಾಯಕರು ಎತ್ತಿನಹೊಳೆ ವಿರುದ್ಧ ಬೀದಿಗಿಳಿದರು. ಈ ಯೋಜನೆಗೆ ಕಾರಣರಾದದ್ದು ತಮ್ಮ ಪಕ್ಷದವರೇ ಎಂಬುದನ್ನು ಮರೆತರು. ಇವರ ಹೋರಾಟ ಕೇವಲ ಕಾಂಗ್ರೆಸ್ ಪಕ್ಷವನ್ನು ದೂಷಿಸಲು ಮತ್ತು ಅದನ್ನು ಅಧಿಕಾರದದಿಂದ ಕೆಳಗಿಳಿಸಲು ಮಾತ್ರ ಇರುವಂತಿದೆ. ಅದಲ್ಲದಿದ್ದರೆ ಇವರು ಈ ಯೋಜನೆ ಆರಂಭಿಸಿದ ಯಡಿಯೂರಪ್ಪ ಮತ್ತು ಸದಾನಂದ ಗೌಡರನ್ನು ತಮ್ಮೊಡನೆ ಸೇರಿಸಿಕೊಳ್ಳಬೇಕಿತ್ತು. ಕೊನೆ ಪಕ್ಷ ರಾಜ್ಯ ಬಿಜೆಪಿಯ ವತಿಯಿಂದಲಾದರೂ ಎತ್ತಿನಹೊಳೆ ಯೋಜನೆ ವಿರುದ್ಧ ಹೇಳಿಕೆ ಕೊಡಿಸಬೇಕಿತ್ತು.

ರಾಜ್ಯ ಹಾಗೂ ಕೇಂದ್ರ ನಾಯಕರ ಬೆಂಬಲವಿಲ್ಲದೆ, ಜಿಲ್ಲೆಯ ಕೆಲವು ನಾಯಕರು ಮಾತ್ರ ಬಿಜೆಪಿಯ ಹೆಸರಲ್ಲಿ ಹೋರಾಟ ಮಾಡುವುದು ಅಪ್ರಾಮಾಣಿಕ ನಡೆಯಾಗಿಯೇ ಕಾಣುತ್ತದೆ.

ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಹಿಂದಿನ ಸರಕಾರದ ಯೋಜನೆಯನ್ನು ಮುಂದುವರಿಸಿದೆ ಅಷ್ಟೇ. ಜಿಲ್ಲೆಯ ಕಾಂಗ್ರೆಸ್ ನಾಯಕರಿಗೆ ಸರಕಾರದ ವಿರುದ್ಧ ಹೋರಾಡುವುದು ಸಾಧ್ಯವೇ ? ಇದು ಬಿಜೆಪಿಗೂ ಅನ್ವಯಿಸುತ್ತದೆ. ಇನ್ನು ಕೆಲವು ಕಾಂಗ್ರೆಸ್ಸಿಗರ ಗುಂಪೊಂದು ಕೇವಲ ರಾಜಕೀಯ ಅಸ್ತಿತ್ವಕ್ಕಾಗಿ ಈ ಹೋರಾಟಕ್ಕೆ ಧುಮುಕಿದ್ದಾರೆಯೇ ಹೊರತು, ಇತರ ಯಾವುದೇ ಜನಪರ ಹೋರಾಟಗಳಲ್ಲಿ ಅವರು ಕಾಣಿಸಿಕೊಳ್ಳುತ್ತಿಲ್ಲ.

ಇನ್ನು ಜನಾರ್ಧನ ಪೂಜಾರಿಯವರು ಪಕ್ಷದ ಕಚೇರಿಯಲ್ಲೇ ಪತ್ರಿಕಾಗೋಷ್ಠಿ ಮಾಡಲಾಗದಷ್ಟು ಪಕ್ಷದಿಂದ ದೂರ ಸರಿದಿದ್ದಾರೆ. ಇತ್ತೀಚೆಗೆ ಅವರಿಗಿರುವುದು ಒಂದೇ ಅಜೆಂಡಾ – ಅದು ಸಿದ್ಧರಾಮಯ್ಯನವರ ಮೇಲೆ ಆರೋಪಗಳನ್ನು ಹೊರಿಸುವುದು ಮತ್ತು ಅವರು ಮುಖ್ಯಮಂತ್ರಿ ಸ್ಥಾನ ಬಿಡುವಂತೆ ಒತ್ತಾಯಿಸುವುದು. ಬಿಜೆಪಿಯವರಿಗೆ ಇದು ಸುಗ್ರಾಸ ಭೋಜನದ ಅನುಭವವನ್ನೇ ಕೊಡುತ್ತಿದೆ.

ಬಿಜೆಪಿಯ ಧುರೀಣರೇ ಹೆಚ್ಚಾಗಿ ನಾಯಕತ್ವ ವಹಿಸಿರುವ ಈಗಿನ ಎತ್ತಿನಹೊಳೆ ಹೋರಾಟದ ಹಿಡನ್ ಅಜೆಂಡಾ ಬಹಳ ಸ್ಪಷ್ಟ                ವಾಗತೊಡಗಿದೆ. ಪಂZತೀರ್ಥ, ಸಪ್ತಕ್ಷೇತ್ರ, ರಥಯಾತ್ರೆಗಳೆಲ್ಲಾ ಹಿಂದೂ ಧರ್ಮ ಸಂಬಂಧಿ ಪದಗಳೇ ಆಗಿವೆ. ಇವರ ರಥಯಾತ್ರೆ ದೇವಸ್ಥಾನದಿಂದ ದೇವಸ್ಥಾನಕ್ಕೆ ಸಾಗುತ್ತದೆ. ನದಿ ನೀರು ತೀರ್ಥವಾಗುವುದು ಹಿಂದೂಗಳಿಗೆ ಮಾತ್ರ. ನೇತ್ರಾವತಿ ನೀರಿಗಾಗಿ ಹೋರಾಡುವಾಗ ಇತರ ನದಿಗಳ ನೀರೆತ್ತುವುದೇಕೆ ? ಹಿಂದೂತ್ವವಾದಿಗಳಿಗೆ ಮಾತ್ರ ಪಂಥತೀರ್ಥ, ಸಪ್ತಕ್ಷೇತ್ರ, ರಥಯಾತ್ರೆಗಳು ಸ್ವೀಕಾರಾರ್ಹವಾಗಬಹುದು. ಮುಸ್ಲಿಮರಿಗೆ, ಕ್ರೈಸ್ತರಿಗೆ, ದಲಿತರಿಗೆ ಈ ದೇವಸ್ಥಾನಗಳ ಯಾತ್ರೆ ಬೇಕೆ ? ತೀರ್ಥ ಬೇಕೇ ? ರಥಯಾತ್ರೆ ಯಾಕೆ ?

ಹೇಳಿಕೆಗಳಲ್ಲಿ, ಚರ್ಚ್, ಮಸೀದಿಗಳನ್ನು ಹೆಸರಿಸುತ್ತಾ ಎಲ್ಲಾ ಧರ್ಮಗಳವರೂ ಸೇರಿ ಹೋರಾಡುವುದೆಂದೂ ಹೇಳಿದರೂ, ಈ ಹೋರಾಟದ ಶೀರ್ಷಿಕೆ, ಪಂಚತೀರ್ಥ, ಸಪ್ತಕ್ಷೇತ್ರ, ರಥಯಾತ್ರೆ ಎಂಬುದು ಕೇವಲ ಹಿಂದೂತ್ವವಾದಿ ಹಿಡನ್ ಅಜೆಂಡಾ ಇದು ಎಂಬುದನ್ನು ಬಯಲು ಮಾಡಿದೆ.

ಎತ್ತಿನಹೊಳೆ ವಿರುದ್ಧ ಹೋರಾಡುವ ಪ್ರಾಮಾಣಿಕ ಹೋರಾಟಗಾರರೂ ಇದ್ದಾರೆ. ಪರಿಸರವಾದಿಗಳ ಕಾಳಜಿಯೂ ಪ್ರಾಮಾಣಿಕವೇ. ಆದರೆ ಅವರ ಕಾಳಜಿ ಹೋರಾಟಗಳನ್ನು ರಾಜಕೀಯ ಪಕ್ಷ ಮತ್ತು ಸಂಘಟನೆಗಳು ತಮ್ಮ ಲಾಭಕ್ಕೆ ಬಳಸಿಕೊಂಡರೆ, ಹೋರಾಟವನ್ನು  ಹೈಜಾಕ್ ಮಾಡಿದರೆ ನಾಳೆ ಇವರನ್ನು ನಂಬಲು ಸಾಧ್ಯವಿಲ್ಲ. ನಾವು ಕೊನೆವರೆಗೂ ನಿಮ್ಮೊಂದಿಗೆ ಇರುವುದು. ಆದರೆ ರಾಜ್ಯ ನಾಯಕತ್ವದ ತೀರ್ಮಾನದ ಮುಂದೆ ನಾವೇನು ಮಾಡಲು ಸಾಧ್ಯ ಎಂದು ಇವರು ಕೈ ಚೆಲ್ಲುವವರೇ. ಒಂದು ನ್ಯಾಯಯುತ ಹೋರಾಟವನ್ನು ತಮ್ಮ ಸ್ವಾರ್ಥಕ್ಕಾಗಿ ದಾರಿ ತಪ್ಪಿಸುವವರ ಬಗ್ಗೆ ಎಚ್ಚರ ಇರಬೇಡವೇ ?

  • ಮುಕೇಶ್ ಕೆ ಮಂಗಳೂರು