ಎತ್ತಿನಹೊಳೆ : ಪರಿಷ್ಕøತ ಭೂಮಿ ದರ ನಿಗದಿಯಿಂದ ಭೂಮಾಲಕರು ಅತೃಪ್ತ

ಎಕರೆಗೆ ರೂ 1 ಕೋಟಿಯಾದರೂ ನೀಡಬೇಕೆಂದು ಕಾಫಿ ಬೆಳೆಗಾರರ ಪಟ್ಟು

ಹಾಸನ : ವಿವಾದಿತ ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ಪೀಠ ಇತ್ತೀಚೆಗೆ ನೀಡಿದ ಆದೇಶದಿಂದ ಈ ಯೋಜನೆ ಜಾರಿಗೆ ರಾಜ್ಯ ಸರಕಾರ ಎದುರಿಸುತ್ತಿದ್ದ ದೊಡ್ಡ ಅಡ್ಡಿಯೊಂದು ನಿವಾರಣೆಯಾಗಿದ್ದರೂ ಪ್ರಥಮ ಹಂತಕ್ಕೆ ಅಗತ್ಯವಾದ ಭೂಮಿ ಖರೀದಿಸಲು ಸರಕಾರ ಪರದಾಡಬೇಕಾದ ಪ್ರಸಂಗ ಎದುರಾಗಿದೆ.

ಭೂಮಾಲಕರು ಮುಖ್ಯವಾಗಿ ಕಾಫಿ ಬೆಳೆಗಾರರು ಹಾಸನ ಜಿಲ್ಲಾಧಿಕಾರಿ ನೇತೃತ್ವದ  ನೇರ ಖರೀದಿ ಸಮಿತಿಯು ನಿಗದಿ ಪಡಿಸಿದ ಪರಿಷ್ಕøತ ದರಕ್ಕೆ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನೇತೃತ್ವ ಸಮಿತಿ ಸಭೆ ಸೇರಿ ಒಣ ಭೂಮಿ, ಕಾಫಿ ಪ್ಲಾಂಟೇಶನ್, ಪರಿವರ್ತಿತ ಭೂಮಿ ಹಾಗೂ ಫಲವತ್ತಾದ ಭೂಮಿಗೆ ದರ ನಿಗದಿ ಪಡಿಸಿದೆ.

ಸಮಿತಿಯು ಒಣ ಭೂಮಿಗೆ, ಫಲವತ್ತಾದ ಭೂಮಿಗೆ, ಕಾಫಿ ಪ್ಲಾಂಟೇಶನ್ ಹಾಗೂ ತೋಟಗಳಿಗೆ ಕ್ರಮವಾಗಿ ಎಕರೆಗೆ ರೂ 22,28,575, ರೂ 24,39,024, ರೂ 38,46,576, ರೂ 24,39,024 ನಿಗದಿ ಪಡಿಸಿದ್ದರೆ ಪರಿವರ್ತಿತ ಭೂಮಿಗೆ ಪ್ರತಿ ಚದರ ಮೀಟರಿಗೆ ರೂ 2000 ನಿಗದಿ ಪಡಿಸಿದೆ.

ಈ ಹಿಂದೆ ಕಳೆದ ಮೂರು ವರ್ಷಗಳಲ್ಲಿ ಭೂಮಿ ಖರೀದಿ ಬೆಲೆಯನ್ನು ಪರಿಗಣಿಸಿ ದರ ನಿಗದಿ ಪಡಿಸಲಾಗಿತ್ತು. ಆಗ ದರವು ಬೇರೆ ಬೇರೆ ಗ್ರಾಮಗಳಿಗೆ ಭಿನ್ನವಾಗಿತ್ತು. ಆದರೆ ಈ ಬಾರಿ ಸಮಾನ ದರ ನಿಗದಿ ಪಡಿಸಲಾಗಿದೆ.

ಪ್ರಥಮ ಹಂತದ ಯೋಜನೆಗೆ 448 ಎಕ್ರೆ ಮತ್ತು 33 ಗುಂಟೆ ಖಾಸಗಿ ಭೂಮಿ ಅಗತ್ಯವಿದೆ. ಕಾಫಿ ಬೆಳೆಗಾರರು ದರ ನಿಗದಿಯಿಂದ ಅಸಂತುಷ್ಟರಾಗಿದ್ದು, ತಮ್ಮ ಭೂಮಿಗಳಿಗೆ ಎಕರೆಗೆ ರೂ 1 ಕೋಟಿ ದೊರೆಯಬೇಕೆಂದು ಹೇಳುತ್ತಿದ್ದಾರೆ.

ಕಳೆದ ವರ್ಷ ಯೋಜನೆಗಾಗಿ ತಮ್ಮ 27 ಎಕರೆ ಭೂಮಿಯನ್ನು ಸ್ವಇಚ್ಛೆಯಿಂದ ನೀಡಿದ 11 ಮಂದಿಯಲ್ಲಿ ದೇವಿಹಳ್ಳಿಯ ಟಿ ಪಿ ಸುರೇಂದ್ರ ಒಬ್ಬರಾಗಿದ್ದಾರೆ. ಅವರ ಭೂಮಿಗೆ ಉತ್ತಮ ಬೆಲೆ ನೀಡಲಾಗುವುದು ಎಂಬ ಆಶ್ವಾಸನೆ ನೀಡಲಾಗಿತ್ತು. ಈ ಭೂಮಿ ಲಭ್ಯತೆಯಿಂದಲೇ ಆರಂಭಿಕ ಕಾಮಗಾರಿ ಆರಂಭವಾಗಿತ್ತು. ಆದರೆ ಈಗ ಈ ಜನರೂ ದರ ನಿಗದಿಯಿಂದ ಅಸಂತುಷ್ಟರಾಗಿದ್ದಾರೆ

ಕಾಫಿ ತೋಟಗಳಲ್ಲಿ ಬೆಳೆಯಲಾಗುವ ಕರಿಮೆಣಸು, ಅಡಿಕೆ ಹಾಗೂ ಬಾಳೆಗಿಡಗಳ ಬಗ್ಗೆ ಸಮಿತಿ ಪರಿಗಣಿಸಿಯೇ ಇಲ್ಲ ಎಂಬುದು ಅವರ ದೂರು ಆಗಿದೆ.

“ನಾವು ಎಕರೆಗೆ ಕನಿಷ್ಠ ರೂ 60 ಲಕ್ಷ ನಿರೀಕ್ಷಿಸಿದ್ದೆವು, ಆದರೆ ಸಮಿತಿ ಕಡಿಮೆ ಬೆಲೆ ನಿಗದಿ ಪಡಿಸಿದೆ” ಎಂದು ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಅಧ್ಯಕ್ಷ ಸಿ ಎಸ್ ಮಹೇಶ್ ಅಸಮಾಧಾನ ವ್ಯಕ್ತಪಡಿಸುತ್ತಾರೆ.