ಈಶ್ವರಪ್ಪ ವಿರುದ್ದ ಪಕ್ಷ ಅಧ್ಯಕ್ಷಗೆ ಯಡ್ಡಿ ದೂರು

ನವದೆಹಲಿ : ಬಿಜೆಪಿ ಮುಖಂಡ ಈಶ್ವರಪ್ಪ ಸಂಗೊಳ್ಳಿ ರಾಯಣ್ಣ ಬ್ರಿಗೇಡಿನಲ್ಲಿ ಮುಂದುವರಿಯುವುದು ಬೇಡ ಎಂದು ಬಿಜೆಪಿ ಮುಖಂಡ ರಾಮಲಾಲ್ ಕಟ್ಟಪ್ಪಣೆ ಜಾರಿಗೊಳಿಸಿದ್ದರೂ, ಈಶ್ವರಪ್ಪ ಹೈ ಕಮಾಂಡ್ ಆದೇಶವನ್ನು ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಯಡ್ಡಿಯೂರಪ್ಪ ಹೈಕಮಾಂಡ್ ಮೊರೆಹೋಗಿದ್ದಾರೆ.

ರಾಜ್ಯ ಬಿಜೆಪಿ ಘಟಕದ ಮುಖಂಡರು ರಾಜ್ಯದಾದ್ಯಂತ ಪ್ರವಾಸ ಮಾಡಿ ಪಕ್ಷದ ಪರ ಒಲವನ್ನು ಹೆಚ್ಚಿಸಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ, ಈಶ್ವರಪ್ಪ ಪಕ್ಷದ ಇಮೇಜ್‍ಗೆ ಧಕ್ಕೆ ತರುವಂತಹ ವರ್ತನೆ ತೋರುತ್ತಿದ್ದಾರೆ ಎಂದು ಯಡ್ಡಿಯೂರಪ್ಪ ನೇರವಾಗಿ ಹೈಕಮಾಂಡಿಗೆ ದೂರು ನೀಡಿದ್ದಾರೆ.

ಬಿಜೆಪಿಯಲ್ಲಿಯೇ ಹಿಂದುಳಿದ ವರ್ಗಗಳ ಘಟಕಗಳಿದ್ದರೂ ಮತ್ತೊಂದು ಪ್ರತ್ಯೇಕ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟು ಉದ್ದೇಶವೇನು ಎಂದು ಪ್ರಶ್ನಿಸಿದ ಅವರು, ಈಶ್ವರಪ್ಪ ಸ್ವೇಚ್ಚಾಚಾರದ ವರ್ತನೆ ಪಕ್ಷಕ್ಕೆ ಮುಳುವಾಗಬಹುದು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಎದುರು ಆತಂಕ ವ್ಯಕ್ತಪಡಿಸಿದ್ದಾರೆ.

ಈಶ್ವರಪ್ಪ ಅವರನ್ನು ಕರೆಸಿ ಎದುರಾಗಿರುವ ಸಮಸ್ಯೆಗಳನ್ನು ಇತ್ಯರ್ಥಗೊಳಿಸುವುದಾಗಿ ಅಮಿತ್ ಶಾ ಭರವಸೆ ನೀಡಿದ್ದಾರೆ ಎಂದು ಯಡ್ಡಿಯೂರಪ್ಪ ಬಣದ ಮೂಲಗಳು ತಿಳಿಸಿವೆ.