ಯಡ್ಡಿ ಆಪ್ತ ಸಹಾಯಕ ಸಂತೋಷ್ ಪೊಲೀಸ್ ವಿಚಾರಣೆ ಮುಂದುವರಿಕೆ

ಬೆಂಗಳೂರು : ಬಿಜೆಪಿ ಮುಖಂಡ ಈಶ್ವರಪ್ಪರ ಆಪ್ತ ಸಹಾಯಕ ವಿನಯ್ ಅಪಹರಣ ಯತ್ನ ಪ್ರಕರಣದ ಆರೋಪಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪರ ಆಪ್ತ ಸಹಾಯಕ ಸಂತೋಷ್ ಪೊಲೀಸ್ ವಿಚಾರಣೆ ನಿನ್ನೆಯೂ ನಡೆದಿದೆ.

ಈ ಪ್ರಕರಣದಲ್ಲಿ ಸಂತೋಷ್ ಪಾತ್ರವೇನೆಂಬುದನ್ನು ತಿಳಿಯಲು ಪೊಲೀಸರು ಕಳೆದ ಮೂರು ದಿನಗಳಿಂದ ವಿಚಾರಣೆ ನಡೆಸುತ್ತಿದ್ದಾರೆ. ಈ ಕೇಸಿನಲ್ಲಿ ಸಂತೋಷ್ ಪ್ರಮುಖ ಆರೋಪಿಯಾಗಿದ್ದಾನೆ.

ಕಳೆದ ಮೇ ತಿಂಗಳಲ್ಲಿ ಉತ್ತರ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟಿನಲ್ಲಿ ವಿನಯ್ ತನ್ನ ಕಾರಿನಲ್ಲಿ ಸಾಗುತ್ತಿದ್ದಾಗ ಗ್ಯಾಂಗೊಂದು ತಡೆದು, ಅಪಹರಣಕ್ಕೆ ಯತ್ನಿಸಿದೆ. ಇದನ್ನು ಕಂಡ ಸುತ್ತಮುತ್ತಲಿನವರು ಬೊಬ್ಬೆ ಹಾಕಿದಾಗ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದರು. ವಿನಯನಲ್ಲಿದ್ದ `ದೋಷಾರೋಪಣೆ ಮಾಹಿತಿ’ ಒಳಗೊಂಡಿದ್ದ ಸೀಡಿ ಮತ್ತು ಪೆನ್ ಡ್ರೈವ್ ಕಸಿದುಕೊಳ್ಳಲು ದುಷ್ಕರ್ಮಿಗಳು ಪ್ರಯತ್ನಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.  ಇಂದು ಕೂಡಾ ಸಂತೋಷ್ ವಿಚಾರಣೆ ಮುಂದುವರಿಯಲಿದೆ.

ಪ್ರಕರಣದ ಮತ್ತೊಬ್ಬ ಆರೋಪಿ ಪ್ರಶಾಂತ ರಾಜು ವಿಚಾರಣೆ ವೇಳೆ ತನ್ನ ಜೊತೆಗಿದ್ದ ಕಿಶೋರ್, ಸೆಲ್ವಂ, ಅಯ್ಯಪ್ಪ ಮತ್ತು ಅರವಿಂದರ ಹೆಸರು ಬಾಯಿಬಿಟ್ಟಿದ್ದಾನೆ. ಇವರೆಲ್ಲ ಯಡಿಯೂರಪ್ಪರ ನಿವಾಸದ ಕಾರ್ಯಕ್ರಮವೊಂದಕ್ಕೆ ಹೋಗಿದ್ದ ವೇಳೆ, ಸಂತೋಷನ ಸಹವರ್ತಿ ರಾಜೇಂದ್ರ ಅರಸನು ತನ್ನನ್ನು (ರಾಜು) ಭೇಟಿಯಾಗಿ ವಿನಯನನ್ನು ಅಪಹರಿಸಿ ಆತನ ಬಳಿ ಇದ್ದ ಸೀಡಿ ಮತ್ತು ಪೆನ್ ಡ್ರೈವ್ ಕಿತ್ತುಕೊಳ್ಳಲು ಸಂಚು ನಡೆಸಲಾಗಿತ್ತು ಎಂದಿದ್ದಾನೆ.

ವಿನಯ್ ಅಪಹರಣ ಯಶಸ್ವಿಯಾದಲ್ಲಿ ಸಾಕಷ್ಟು ಹಣ ನೀಡುವುದಾಗಿ ಅರಸ್, ರಾಜುವಿಗೆ ಭರವಸೆ ನೀಡಿದ್ದ ಎನ್ನಲಾಗಿದೆ.

ಸದ್ರಿ ಗ್ಯಾಂಗಿಗೆ ಅರಸನು ವಿನಯನ ದೈನಂದಿನ ಚಟುವಟಿಕೆ ಮಾಹಿತಿ ನೀಡಿರುವುದಲ್ಲದೆ, ಅಪಹರಣಕ್ಕೆ ಬಳಸಲು ಹಾಕಿ ಸ್ಟಿಕ್ ಮತ್ತು ಮೆಣಸಿನ ಹುಡಿ ನೀಡಿದ್ದ.