ಯಡ್ಡಿಯೂರಪ್ಪ ಇನ್ನೊಮ್ಮೆ ಜೈಲಿಗೆ ಹೋಗ್ತಾರೆ : ಸಿದ್ದು

ಹುಬ್ಬಳ್ಳಿ  : “ಭ್ರಷ್ಟ ಅಧಿಕಾರಿಗಳ ಅಕ್ರಮ ವ್ಯವಹಾರಕ್ಕೆ ನನ್ನ ಬೆಂಬಲವಿದೆ, ಹೀಗಾಗಿ ನಾನು ಮತ್ತು ನನ್ನ ಆಪ್ತರು ಜೈಲಿಗೆ ಹೋಗ್ತಾರೆ ಎಂದು ಆರೋಪಿಸುವ ಯಡ್ಡಿಯೂರಪ್ಪ ತಾವೇ ಜೈಲಿಗೆ ಹೋಗುತ್ತಾರೆ” ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.

ನಗರದ ನೆಹರೂ ಮೈದಾನದಲ್ಲಿ ಭಾನುವಾರ ನಡೆದ ಮಾದಿಗರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, “ಈ ಹಿಂದೆ ಯಡ್ಡಿಯೂರಪ್ಪ ಜೈಲಿಗೆ ಹೋಗಿದ್ದನ್ನು ಮತ್ತೆ ಮತ್ತೆ ಕನಸು ಕಾಣುತ್ತಿರಬಹುದು. ಹೀಗಾಗಿ ರಾಜ್ಯದಲ್ಲಿ ಮಾಜಿ ಸೀಎಂವೊಬ್ಬರು ಮರಳಿ ಜೈಲಿಗೆ ಹೋಗಬಹುದು” ಎಂದು ವ್ಯಂಗ್ಯವಾಡಿದರು.

“ಅಕ್ರಮ ಆಸ್ತಿ ಹಾಗೂ ಅಕ್ರಮ ಹಣ ಸಂಪಾದಿಸಿರುವ ಆರೋಪದಲ್ಲಿ ಸಿಲುಕಿರುವ ಚಿಕ್ಕರಾಯಪ್ಪ ನಮ್ಮ ಆಪ್ತರೇನಲ್ಲ, ಕೇವಲ ನಮ್ಮ ಜಾತಿಯವರಷ್ಟೇ” ಎಂದರು.

“ರಾಜ್ಯದಲ್ಲಿನ ಹಲವಾರು ಸಮಸ್ಯೆಗಳ ಬಗ್ಗೆ ಪ್ರಧಾನಿಗೆ ಮನವರಿಕೆ ಮಾಡಲು ಸರ್ವಪಕ್ಷ ನಿಯೋಗವು ಹೋದಾಗ ಪ್ರಧಾನಿ ಮೋದಿ ನಮಗೆ ಸಮಯ ನೀಡಲಿಲ್ಲ. ಇದು ಪ್ರಜಾಫ್ರಭುತ್ವ ವ್ಯವಸ್ಥೆಯಲ್ಲಿ ಸರಿಯಲ್ಲ” ಎಂದು ಬೇಸರ ವ್ಯಕ್ತಪಡಿಸಿದರು. “ರಾಜ್ಯ ಮತ್ತು ಕೇಂದ್ರಗಳ ನಡುವೆ ಸಹಕಾರದ ಬಗ್ಗೆ ಮಾತನಾಡುವ ಮೋದಿ, ಬರ ಸಮಸ್ಯೆ ಮತ್ತು ಜಲವಿವಾದಗಳ ಬಗ್ಗೆ ಮಾತನಾಡಲು ಹೋದರೆ ಸರಿಯಾಗಿ ಸ್ಪಂದಿಸಲಿಲ್ಲ. ಹಿಂದಿನ ಪ್ರಧಾನಿ ಈ ರೀತಿ ಎಂದೂ ಮಾಡಿರಲಿಲ್ಲ” ಎಂದರು.

ಮುಂದಿನ ವರ್ಷದ ಜನವರಿ ತಿಂಗಳ ಕೊನೆ ದಿನಗಳಲ್ಲಿ ನ್ಯಾ ಸದಾಶಿವ ಆಯೋಗ ಜಾರಿಗೆ ನಿರ್ಧರಿಸಲಾಗಿದೆ ಎಂದರು.

“ನಮ್ಮಲ್ಲಿ ಜಾತಿ ವ್ಯವಸ್ಥೆ ಬಹಳ ಆಳವಾಗಿ ಬೇರೂರಿದೆ. ಅದನ್ನು ಸಂಪೂರ್ಣ ನಿರ್ಮೂಲನೆ ಮಾಡಬೇಕೆಂದರೆ ಸಾಮಾಜಿಕ ಸ್ವಾತಂತ್ರ್ಯದ ಅವಶ್ಯಕತೆಯಿದೆ. ಅಂಬೇಡ್ಕರ್ ಅವರ ಸಿದ್ಧಾಂತಗಳು ಈಡೇರಬೇಕಾದರೆ ರಾಜ್ಯದ ಎಲ್ಲ ಜನಾಂಗಕ್ಕೆ ಸಂಪತ್ತು ಸಮಾನವಾಗಿ ಹಂಚಿಕೆಯಾಗಬೇಕು. ಬಸವಣ್ಣನವರು ನೀಡಿದ ಸಾಮಾಜಿಕ ಸಮಾನತೆ ಬಸವಾದಿ ಶರಣರ ಕಾಲದಲ್ಲಿಯೇ ಹೋಗಲಾಡಿಸಲು ಹೋರಾಟ ನಡೆಯಿತು. ಆದರೆ, ಇಂದಿಗೂ ಅಸ್ಪಶ್ಸೃತೆ ಜೀವಂತವಾಗಿದೆ” ಎಂದು ಖೇದ  ವ್ಯಕ್ತಪಡಿಸಿದರು.