ಕೋಮು ಭಾವನೆ ಕೆರಳಿಸುತ್ತಿರುವ ಯಡ್ಡಿ, ಶೋಭಾ, ನಳಿನ್ : ಸೀಎಂ

ಮೈಸೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ನಾಯಕರು ಕೋಮು ಗಲಭೆಗೆ ಸಾಕಷ್ಟು ಪ್ರಚೋದನೆ ನೀಡುತ್ತಿದ್ದಾರೆಂದು ಸೀಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಎಂಪಿಗಳಾದ ಶೋಭಾ ಕರಂದ್ಲಾಜೆ ಮತ್ತು ನಳಿನ್ ಕುಮಾರ್ ಕಟೀಲ್ ರಾಜಕೀಯ ಲಾಭ ಗಳಿಸಲೆಂದೇ ಕೋಮು ಭಾವನೆ ಕೆರಳಿಸುವಂತಹ ಚಟುವಟಿಕೆಯಲ್ಲಿ ನಿರತರಾಗಿದ್ದಾರೆಂದು ಸೀಎಂ ಸುದ್ದಿಗಾರರಲ್ಲಿ ಹೇಳಿದರು.

ಬಿಜೆಪಿಗರು ಆಯಾ ಕಾಲಕ್ಕೆ ಇಂತಹ ಕೋಮು ವಿಚಾರಗಳೊಂದಿಗೆ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದರಲ್ಲಿ ನಿಸ್ಸೀಮರು ಎಂದರು.

“ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಬಂಧನವಾದರೆ ರಾಜ್ಯ ಹೊತ್ತಿ ಉರಿಯಲಿದೆ ಎಂದು ಯಡಿಯೂರಪ್ಪ ಮತ್ತು ನಳಿನ್ ಬೆದರಿಸುತ್ತಿದ್ದಾರೆ. ಅವರೆಲ್ಲ ಯಾಕೆ ಭಟ್ಟರ ಹೆಸರೆತ್ತುತ್ತಿದ್ದಾರೆ ? ಪ್ರತ್ಯೇಕವಾಗಿ ಭಟ್ ಬಂಧಿಸಲು ನಾನು ಪೊಲೀಸರಿಗೆ ಹೇಳಿದ್ದೇನಾ ? ಜಿಲ್ಲೆಯಲ್ಲಿ ಕೋಮು ಭಾವನೆ ಕೆರಳಿಸಿ, ಹಿಂಸೆಗೆ ಕಾರಣರಾಗುವವರನ್ನು ಬಂಧಿಸಲು ದ ಕ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ. ಅವರು ಜಿಲ್ಲೆಯಲ್ಲಿ ಶಾಂತಿ ಬಯಸಿದ್ದಾರೆ” ಎಂದು ಸಿದ್ದರಾಮಯ್ಯ ತಿಳಿಸಿದರು.

“ಬಿಜೆಪಿ ಸದಸ್ಯರು ರಾಜ್ಯದಲ್ಲಿ ವಿನಾಶಕಾರಿ ಚಟುವಟಿಕೆಯಲ್ಲಿ ತೊಡಗಿದ್ದು, ನಾವು (ಕಾಂಗ್ರೆಸ್) ಸಮಾಜ ಕಟ್ಟುವ ಕೆಲಸ ಮಾಡುತ್ತಿದ್ದೇವೆ. ಹಿಂಸೆಗೆ ಉತ್ತೇಜನ ನೀಡುವುದು ಬಿಜೆಪಿಗರ ಮೂಲಮಂತ್ರವಾಗಿದೆ. ಜನತೆ ಈ ವಿಷಯ ಮನವರಿಕೆ ಮಾಡಿಕೊಳ್ಳಬೇಕು” ಎಂದರು.