ಯಡ್ಡಿ ಭೂಹಗರಣ ವಿರುದ್ಧ ಕೋರ್ಟಿಗೆ ದೂರು ಸಲ್ಲಿಕೆ

ನವದೆಹಲಿ : ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡ್ಡಿಯೂರಪ್ಪ ವಿರುದ್ಧದ ಭೂಹಗರಣ ಪ್ರಕರಣಗಳಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಅರ್ಜಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಸುಪ್ರೀಂ ಕೋರ್ಟಿಗೆ ಹಿರಿಯ ವಕೀಲ ಗೋಪಾಲ ಸುಬ್ರಹ್ಮಣ್ಯಂ ಸೋಮವಾರ ಮಾಹಿತಿ ನೀಡಿದ್ದಾರೆ.

ರಾಜ್ಯದ ರಾಜ್ಯಪಾಲರು  ಯಡ್ಡಿಯೂರಪ್ಪ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅನುಮತಿ ನಿರಾಕರಿಸಿದ ಹೊರತಾಗಿಯೂ ಈ ಕ್ರಮ ಕೈಗೊಳ್ಳಲಾಗಿದೆ ಎಂದು  ವಕೀಲರು  ಜಸ್ಟಿಸ್  ಜೆ ಚೆಲಮೇಶ್ವರ್ ಹಾಗೂ ಜಸ್ಟಿಸ್ ಅಭಯ್ ಮನೋಹರ್ ಸಪ್ರೆಯವರನ್ನೊಳಗೊಂಡ ಪೀಠಕ್ಕೆ ತಿಳಿಸಿದರು.

ಅರ್ಜಿದಾರ ಸಿರಾಜಿನ್ ಬಾಷಾ ಅವರ ಪರವಾಗಿ ವಾದ ಮಂಡಿಸಿದ ಗೋಪಾಲ ಸುಬ್ರಹ್ಮಣ್ಯಂ ಪ್ರಕಾರ, ಹಿಂದಿನ ರಾಜ್ಯಪಾಲ ಎಚ್ ಆರ್ ಭಾರಧ್ವಾಜ್ ಅವರು ಯಡ್ಡಿಯೂರಪ್ಪ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅನುಮತಿ ನೀಡಿದ್ದನ್ನು ರದ್ದುಪಡಿಸಿದ್ದ ಕರ್ನಾಟಕ ಹೈಕೋರ್ಟಿನ ನವೆಂಬರ್ 2015ರ ಆದೇಶದ ವಿರುದ್ಧ ಬಾಷಾ ದಾಖಲಿಸಿದ ಅಪೀಲಿನ ವಿಚಾರಣೆಯನ್ನು  ಸುಪ್ರೀಂ ಕೋರ್ಟ್ ಮುಂದೂಡಿದೆ. ಈಗಿನ ರಾಜ್ಯಪಾಲ ವಜುಭಾಯಿ ವಾಲ ಅವರು ಡಿಸೆಂಬರ್ 4, 2015ರಂದು ಯಡ್ಡಿಯೂರಪ್ಪ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ನಿರಾಕರಿಸಿದಾಗ ಸಹ ದೂರುದಾರ ಕೆ ಎನ್ ಬಲರಾಜ್ ಫೆಬ್ರವರಿ 19,2016ರಂದು ಹೈಕೋರ್ಟಿನಲ್ಲಿ ದೂರು ದಾಖಲಿಸಿದ್ದರು.

ವಾಲ ಅವರ ಅನುಮತಿ ನಿರಾಕರಣೆ ಹಿನ್ನೆಲೆಯಲ್ಲಿ ಅರ್ಜಿದಾರರೇಕೆ ವಿಚಾರಣಾ ನ್ಯಾಯಾಲಯದ ಕದ ತಟ್ಟಬಾರದೆಂದು ಆಗಸ್ಟ್ 22, 2016ರಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತು.