ಗೌರಿ ಪತ್ರಿಕೆಯ ಲೇಟೆಸ್ಟ್ ಸಂಚಿಕೆಯಲ್ಲಿ ಯಡ್ಡಿ ಪ್ರಕರಣದ ಮುಖಪುಟ ಲೇಖನ

ಬೆಂಗಳೂರು : ನಗರದಲ್ಲಿನ ತಮ್ಮ ನಿವಾಸದ ಎದುರಿನಲ್ಲಿಯೇ ಹತ್ಯೆಗೀಡಾದ ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್ ಅವರ `ಗೌರಿ ಲಂಕೇಶ್ ಪತ್ರಿಕೆ’ಯ ಲೇಟೆಸ್ಟ್ ಸಂಚಿಕೆಯಲ್ಲಿ  ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡ್ಯೂರಪ್ಪ ಅವರ ವಿರುದ್ಧದ ಡಿನೋಟಿಫಿಕೇಶನ್ ಪ್ರಕರಣದತ್ತ ವಿಸ್ತøತ ಬೆಳಕು ಚೆಲ್ಲುವ ಮುಖಪುಟ ಲೇಖನವಿದ್ದರೆ ಗೌರಿ ತಮ್ಮ ಕೊನೆಯ ಸಂಪಾದಕೀಯದಲ್ಲಿ ತ್ರಿವಳಿ ತಲಾಖ್ ವಿರುದ್ಧ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸಿದ್ದಾರೆ.

ಯಡ್ಯೂರಪ್ಪ ವಿರುದ್ಧದ ಪ್ರಕರಣದ ಬಗ್ಗೆ ಬರೆಯುತ್ತಾ ಅವರ ಉತ್ತರಾಧಿಕಾರಿಯಾಗಿದ್ದ ಸದಾನಂದ ಗೌಡ ಅವರು ನೀಡಿದ್ದ ತನಿಖೆ ಆದೇಶವನ್ನೂ ಗೌರಿ ಮುಖಪುಟ ಲೇಖನದಲ್ಲಿ ಉಲ್ಲೇಖಿಸಿದ್ದಾರೆ. ಸಂಪಾದಕೀಯ `ಕಂಡಿದ್ದು ಕಂಡ ಹಾಗೆ’ಯಲ್ಲಿ ಲೇಟೆಸ್ಟ್ ಸುಪ್ರೀಂ ಕೋರ್ಟ್ ತೀರ್ಪುಗಳ ಮೇಲಿನ ಅಭಿಪ್ರಾಯವಿದೆ.

ಕೇರಳದಲ್ಲಿನ `ಲವ್ ಜಿಹಾದ್’ ಆರೋಪಗಳ ಬಗ್ಗೆ ಎನ್ನೈಎ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶಿಸಿರುವುದನ್ನು ಗೌರಿ ತಮ್ಮ ಸಂಪಾದಕೀಯದಲ್ಲಿ ಪ್ರಶ್ನಿಸಿದ್ದಾರೆ. ಪತ್ರಿಕೆಯ ಹಲವು ಇತರ ಅಂಕಣಗಳು ಜಾತ್ಯತೀತತೆ, ಸಹಿಷ್ಣುತೆಯ ಮಹತ್ವಗಳ ಬಗ್ಗೆ ಬೆಳಕು ಚೆಲ್ಲತ್ತವೆ.

ಕೋಮು ಸೌಹಾರ್ದ ವೇದಿಕೆಯಂತಹ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಗೌರಿ ಅವರ ಪತ್ರಿಕೆ  ಅಲ್ಪಸಂಖ್ಯಾತರ ಹಾಗೂ ಜಾತ್ಯತೀತ ಶಕ್ತಿಗಳ ಮೇಲೆ ನಡೆಯುತ್ತಿರುವ ದಾಳಿಗಳ ಬಗ್ಗೆ ಕಳೆದ ಕೆಲ ತಿಂಗಳುಗಳಿಂದ ಸತತವಾಗಿ  ಬರೆದಿದೆ.