ಧಾರಾವಾಹಿ ನಿರ್ಮಾಣಕ್ಕಿಳಿದ ಯಶ್

ಸ್ಯಾಂಡಲ್ವುಡ್ಡಿನ ಒಬ್ಬೊಬ್ಬರೇ ನಾಯಕ ನಟರು ನಿರ್ಮಾಪಕರಾಗುತ್ತಿದ್ದಾರೆ. ಅದರಲ್ಲೂ ಟೀವಿ ಧಾರಾವಾಹಿ ನಿರ್ಮಿಸುವತ್ತ ಈ ಹೀರೋಗಳ ಒಲವು ಹೆಚ್ಚುತ್ತಿದೆ. ಈಗಾಗಲೇ ಸುದೀಪ್ ಹಾಗೂ ಪುನೀತ್ ರಾಜಕುಮಾರ್ ಖಾಸಗೀ ಚಾನಲ್ಲಿನಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ನಿರ್ಮಾಣದಲ್ಲಿ ತಮ್ಮ ಬಂಡವಾಳ ತೊಡಗಿಸಿದ್ದಾರೆ. ಪುನೀತ್ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ `ಮನೆದೇವ್ರು’ ಧಾರಾವಾಹಿಯ ನಿರ್ಮಾಪಕನಾಗಿದ್ದರೆ, ಸುದೀಪ್ ಜೀ ಕನ್ನಡ ವಾಹಿನಿಯ `ವಾರಸ್ದಾರ’ ಸೀರಿಯಲ್ ನಿರ್ಮಾಣದಲ್ಲಿ ಹಣ ಹೂಡಿದ್ದಾನೆ. ಈಗ ಅದೇ ದಾರಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ಕೂಡಾ ಸಾಗುತ್ತಿದ್ದಾನೆ.

ಯಶ್ ಸದ್ಯದಲ್ಲೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ದೊಡ್ಡ ಬಜೆಟ್ಟಿನ ಧಾರಾವಾಹಿಯನ್ನು ನಿರ್ಮಿಸಲಿದ್ದಾನಂತೆ. ಅಂದ ಹಾಗೆ ಯಶ್ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದೇ ಟೀವಿ ಧಾರಾವಾಹಿಯ ಮೂಲಕ. ಯಶ್‍ನನ್ನು ಪ್ರತೀ ದಿನ ತಮ್ಮ ಮನೆ ಹಾಲಲ್ಲೇ ಕುಳಿತು ಕಣ್ತುಂಬಿಕೊಳ್ಳುತ್ತಿದ್ದ ಪ್ರೇಕ್ಷಕ ಅವನನ್ನು ದೊಡ್ಡ ಪರದೆ ಮೇಲೂ ಗೆಲ್ಲಿಸಿದ್ದಾರೆ. ಟೀವಿಯ ಜನಪ್ರಿಯತೆಯನ್ನು ಸರಿಯಾಗಿ ಅರಿತು ಅದನ್ನು ಈಗಾಗಲೇ ಅನುಭವಿಸಿರುವ ಯಶ್ ಈಗ ಪುನಃ ಆ ಮಾಧ್ಯಮದಲ್ಲಿ ನಿರ್ಮಾಪಕನಾಗಿ ಇನ್ನೊಮ್ಮೆ ತನ್ನ ಅದೃಷ್ಟ ಪರೀಕ್ಷಿಸಲು ಹೊರಟಿದ್ದಾನೆ.