ಯಕ್ಷಗಾನ ತನ್ನ ಅವನತಿಯನ್ನು ತಾನೇ ಆಹ್ವಾನಿಸಿಕೊಳ್ಳುತ್ತಿದೆ !

ಇತ್ತೀಚೆಗೆ ಮಂಗಳೂರು ನಗರದಲ್ಲಿ ಒಂದೆಡೆ ಪ್ರಸಿದ್ಧ ಕಟೀಲು ಮೇಳದ ಬಯಲಾಟವಿತ್ತು. ಪ್ರಸಂಗ `ಶ್ರೀ ದೇವಿ ಮಹಾತ್ಮೆ’. ಈ ಬಾರಿ ಆಟಗಳ ಪ್ರದರ್ಶನದಲ್ಲಿ ಬದಲಾವಣೆ ಇದೆ  ರಂಗಸ್ಥಳದಲ್ಲಿ ಅಲಂಕಾರ ಕಡಿಮೆ  ಪ್ರಸಂಗವನ್ನು ಪರಿಷ್ಕರಿಸಿದೆ ಎಂದೆಲ್ಲಾ ಹೇಳಲಾಗಿತ್ತು. ಆದರೆ ಈ ಆಟದಲ್ಲಿ ಯಾವ ಪರಿವರ್ತನೆಗಳೂ ಕಂಡುಬರಲಿಲ್ಲ.
ರಂಗಸ್ಥಳದ ಅಟ್ಟಳಿಗೆ ಮೇಲೆ ಮಿನಿಚರ್ ದೀಪ ಇತ್ತು  ದೇವಿಯ ಉಯ್ಯಾಲೆ ಹಿಂದೆ ಭರ್ಜರಿ ರಂಗ ವಿನ್ಯಾಸ ಇತ್ತು. ಬ್ಯಾಂಡು  ಗರ್ನಾಲು ದುಸುಸುಬಾಣ ಎಲ್ಲವೂ ಇದ್ದುವು  ವಿದ್ಯುನ್ಮಾಲಿಯ ಮದುವೆ ದೃಶ್ಯ ಇರುವುದಿಲ್ಲ ಎಂದು ಹೇಳಲಾಗಿತ್ತು  ಆದರೆ ಅದು ಕೂಡಾ ಇತ್ತು  ಯಕ್ಷಗಾನ ಕಲೆಯ ಸತ್ವ ಮತ್ತು ಸ್ವತ್ವದ ರಕ್ಷಣೆಗಾಗಿ ಕೈಗೊಂಡ ಪರಿವರ್ತನೆಯ ತೀರ್ಮಾನಗಳನ್ನು ಅನುಷ್ಠಾನಗೊಳಿಸಲು ಮೇಳದವರಿಗೆ ಸಾಧ್ಯವಾಗಿಲ್ಲ ಎಂಬುದು ಇದರಿಂದ ಅರ್ಥವಾಗುತ್ತದೆ.
ಆಟ ಆಡಿಸುವವರು ಹಣ ಚೆಲ್ಲುವ ಶ್ರೀಮಂತರೂ  ಪ್ರತಿಷ್ಠಿತರೂ ಆಗಿದ್ದರೆ ಅವರ ಮುಂದೆ ಮೇಳ ನಡೆಸುವವರಿಗೂ  ಕಲಾವಿದರಿಗೂ ಧ್ವನಿ ಎತ್ತಲಾಗುವುದಿಲ್ಲ  ಆಡಂಬರ  ವೈಭವಗಳೇ ಕಲೆಯ ಉನ್ನತಿಗೆ ಕಾರಣವಾಗುತ್ತಾವೆಂಬ ಶ್ರೀಮಂತ ಸೇವಾಕರ್ತರ ಹಾಗೂ ಹತ್ತು ಸಮಸ್ತರ ಧೋರಣೆ ವಿರುದ್ಧ ಸೆಟೆದು ನಿಲ್ಲುವವರೇ ಇಲ್ಲ ಎಂಬಂತಾಗಿದೆ.
ಈ ಆಟದಲ್ಲಿ ಮಧ್ಯರಾತ್ರಿ ಹೊತ್ತು ಒಂದು ಕೌತುಕ ನಡೆಯಿತು  ಒಂದು ದೊಡ್ಡ ಕಾರು ರಾತ್ರಿ 12 ಗಂಟೆಗೆ ಆಟ ಆಡುವ ಬಯಲಿಗೆ ಬಂದು ರಂಗಸ್ಥಳದ ಸಮೀಪದಲ್ಲೇ ನಿಂತಿತು. ಓರ್ವ ಪುರೋಹಿತರು ಕಾರಿನಿಂದ ಇಳಿದರು  ಬ್ಯಾಂಡಿನವರು ಎದ್ದು ನಿಂತು ಬೇಂಡು ಬಾರಿಸಿದರು  ಆಟ ನಿಂತಿತು  ರಂಗಸ್ಥಳದ ಮುಂದಿನಿಂದಲೇ ಬ್ಯಾಂಡಿನವರು ಚೌಕಿಗೆ ಹೋದರು  ಅವರ ಹಿಂದಿನಿಂದ ಆ ಪುರೋಹಿತರೂ ಹೋದರು  ಆ ಬಳಿಕ ಆಟ ಮುಂದುವರಿಯಿತು.
ಸ್ವಲ್ಪ ಹೊತ್ತಿನಲ್ಲಿ ಆ ಪುರೋಹಿತರು ಮರಳಿ ಬರುವಾಗ ಬ್ಯಾಂಡಿನವರೂ ಇಲ್ಲ  ಯಾರೂ ಇಲ್ಲ  ಹೇಗಿದೆ ಹೊಸ ಪರಿವರ್ತನೆ  ಪರಿವರ್ತನೆಯ ಬಗ್ಗೆ ವಾದಿಸುವವರೂ ಪುರೋಹಿತರೇ  ನಡುರಾತ್ರಿಯಲ್ಲಿ ಆಟ ನಡೆಯುವಲ್ಲಿಗೆ ಬಂದು ಪ್ರದರ್ಶನಕ್ಕೆ ಭಂಗ ತರುವವರೂ ಪುರೋಹಿತರೇ. ವ್ಯವಸ್ಥಾಪಕರ  ಪುರೋಹಿತರ  ಕಲಾವಿದರ  ಸೇವಾಕರ್ತರ  ಹತ್ತು ಸಮಸ್ತರ ತೆವಲುಗಳ ನಡುವೆ ಯಕ್ಷಗಾನ ಕಲೆ  ತನ್ನ ಅವನತಿಯನ್ನು ಬೇಗನೇ ಬರಮಾಡಿಕೊಳ್ಳುವುದಂತೂ ಖಾತ್ರಿ.

  • ಮಹೇಶ್ ಕಂಕನಾಡಿ, ಮಂಗಳೂರು