`ಯಕ್ಷಗಾನದಿಂದ ಕನ್ನಡ ಭಾಷೆ ಸಮೃದ್ಧವಾಗಿದೆ’

ನಮ್ಮ ಪ್ರತಿನಿಧಿ ವರದಿ

ಕುಮಟಾ : “ಕರಾವಳಿಯ ಗಂಡುಕಲೆಯಾದ ಯಕ್ಷಗಾನದಿಂದಲೇ ಕನ್ನಡ ಭಾಷೆ ಸಮೃದ್ಧವಾಗಿದೆ” ಎಂದು ಕಸಾಪ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಹೇಳಿದರು.

ತಾಲೂಕಾ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು “ಯಕ್ಷಗಾನ ಸಾಹಿತ್ಯ ಅಜ್ಞಾತ ಕವಿಗಳಿಂದ ಸಮೃದ್ಧವಾಗಿದೆ. ಕರಾವಳಿ ಪ್ರದೇಶದಲ್ಲಿ ಕನ್ನಡ ಭಾಷೆ ಜೀವಂತವಾಗಿರಲು ಯಕ್ಷಗಾನ ಸಂಸ್ಕøತಿಯೇ ಕಾರಣವಾಗಿದೆ. ಕೇವಲ ಸಾಹಿತ್ಯ ಬರೆಯುವುದಷ್ಟೇ ಅಲ್ಲದೇ ಕನ್ನಡವನ್ನು ಅಳವಡಿಸಿಕೊಂಡು, ಕನ್ನಡಕ್ಕಾಗಿ ಬದುಕಿದವರೂ ಕೂಡ ಸಾಹಿತಿಗಳೇ” ಎಂದರು.

“ಟೀವಿ ವ್ಯಾಮೋಹದಿಂದ ಜನರು ಕನ್ನಡ ಭಾಷೆ ಮರೆಯುತ್ತಿದ್ದಾರೆ. ಕನ್ನಡ ಭಾಷೆಗೆ ಅಪಾರ ಗೌರವವಿದೆ. ಆದರೆ, ಭಾರತೀಯ ಪರಂಪರೆಯಲ್ಲಿ ಕನ್ನಡ ಬಾಷೆಯನ್ನು ದುರುಪಯೋಗ ಮಾಡಲಾಗುತ್ತಿದೆ” ಎಂದು 5ನೇ ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಜಿ ಎಲ್ ಹೆಗಡೆ ಹೇಳಿದರು.

“ಯಕ್ಷಗಾನ ಕಲೆಯಿಂದ ಕನ್ನಡ ಭಾಷೆಯ ಸಂಪತ್ತು ಬೆಳೆಯಲು ಕಾರಣವಾಗಿದೆ. ಭಾರತೀಯ ಸಂಸ್ಕøತಿಯಲ್ಲಿ ಮಾತೃಭಾಷೆಗೆ ವಿಶಿಷ್ಠ ಸ್ಥಾನವಿದೆ. ಕಾವ್ಯದ ರಚನೆಗೆ ಅನುಭವ ಬೇಕು. ಉತ್ತಮ ಭಾಷೆ, ನಡವಳಿಕೆಯಿಂದ ಮನಸ್ಸು ಹಿತವಾಗಿರುವ ಜೊತೆಗೆ ಆನಂದ ಲಭ್ಯವಾಗುತ್ತದೆ. ಹಾಗಾಗಿ ಜೀವನದಲ್ಲಿ ಮಾತು ಮತ್ತು ಕೃತಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಭಾಷೆಯನ್ನು ಆಕ್ರಮಣಕಾರಿಯಾಗಿ ಬಳಸಿಕೊಳ್ಳುವ ಬದಲೂ ಧನಾತ್ಮಕ ಚಿಂತನೆಯ ಮೂಲಕ ಬಳಸಿಕೊಂಡರೆ ಸಮಸ್ಯೆಯಾಗದು. ಭಾಷೆಯನ್ನು ದುರ್ಬಳಕೆ ಮಾಡುವುದು ಸರಿಯಲ್ಲ. ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಸಿಗಬೇಕು. ಕನ್ನಡ ಭಾಷೆಯನ್ನು ರಕ್ಷಿಸಿಕೊಳ್ಳುವ ಜವಾಬ್ದಾರಿ ಕೇವಲ ಸಾಹಿತಿಗಳಿಗೆ ಮಾತ್ರವಲ್ಲ. ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ. ಹಾಗಾಗಿ ಜಾತಿ, ಪಕ್ಷವನ್ನು ಮರೆತು ಎಲ್ಲರೂ ಒಂದಾಗಿ ಕನ್ನಡ ಭಾಷೆ ಉಳಿಸಲು ಪ್ರಯತ್ನಿಸಬೇಕು” ಎಂದರು.