ಯಕ್ಷಗಾನದಲ್ಲಿನ ಜಾತಿವ್ಯವಸ್ಥೆಯ ವೈಭವೀಕರಣ ಮಾರ್ಪಾಡಿಗೆ ಹಿರಿಯ ಸಾಹಿತಿ ಜಲವಳ್ಳಿ ಸಲಹೆ

ಕಲಾಶ್ರೀ ಯಕ್ಷಮಿತ್ರ ಮಂಡಳಿ ಲೋಕಾರ್ಪಣಾ ಕಾರ್ಯಕ್ರಮ

ನಮ್ಮ ಪ್ರತಿನಿಧಿ ವರದಿ

ಹೊನ್ನಾವರ : “ಯಕ್ಷಗಾನದ ಕೆಲವು ಪ್ರಸಂಗಗಳಲ್ಲಿ ಭಾರತದ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಜಾತಿವ್ಯವಸ್ಥೆಯ ವೈಭವೀಕರಣವಿದೆ. ಸಂವಿಧಾನದ ಆಶಯಗಳಿಗೆ ತಕ್ಕಂತೆ ಪ್ರಸಂಗಗಳಲ್ಲಿ ಮಾರ್ಪಾಡುಗಳನ್ನು ಮಾಡಬೇಕು” ಎಂದು ಹಿರಿಯ ಸಾಹಿತಿ ಸುಮುಖಾನಂದ ಜಲವಳ್ಳಿ ಹೇಳಿದರು.

ಪ್ರಭಾತನಗರದ ಶ್ರೀ ಮೂಡಗಣಪತಿ ಸಭಾಭವನದಲ್ಲಿ ನಡೆದ ಕಲಾಶ್ರೀ ಯಕ್ಷಮಿತ್ರ ಮಂಡಳಿ ಹುಡಗೋಡ ಇದರ ಲೋಕಾರ್ಪಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

“ಯಾವುದೇ ಕಲೆಯು ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಿರಬೇಕು. ಆದರೆ ಹಲವಾರು ಯಕ್ಷಗಾನ ಪ್ರಸಂಗಗಳಲ್ಲಿ ಜಾತಿವ್ಯವಸ್ಥೆ ಬಲಪಡಿಸುವ ಸನ್ನಿವೇಶಗಳಿವೆ. ಮಹಾಭಾರತದ ಪ್ರಸಂಗದಲ್ಲಿ ಕರ್ಣನನ್ನು ಸೂತಪುತ್ರ ಎಂದು ಜರೆಯಲಾಗಿದ್ದು, ಆ ಮೂಲಕ ಅಂಬಿಗ ಸಮಾಜವನ್ನು ಅಪಮಾನಿಸುವ ಸನ್ನಿವೇಶ ಪ್ರದರ್ಶನವಾಗುತ್ತಿದೆ. ಅಷ್ಟೇ ಅಲ್ಲದೇ ಹಲವಾರು ಪ್ರಸಂಗಗಳಲ್ಲಿ ಕೆಳಜಾತಿಯವರೆಂದೂ ಅವಮಾನಿಸಿ ಅಸಮಾನತೆಯನ್ನು ಬಲಪಡಿಸುವ ಸನ್ನಿವೇಶಗಳು ವೈಭವೀಕರಣಗೊಳ್ಳುತ್ತಿದೆ. ಇಂದಿನ ಸಮಾಜದಲ್ಲಿ ಜಾತಿ ವ್ಯವಸ್ಥೆಯು ದೂರವಾಗಿದ್ದು, ಸಮಾನತೆ ನಿರ್ಮಾಣವಾಗಿದೆ. ಸಂವಿಧಾನದ ಆಶಯಗಳಿಗೆ ತಕ್ಕಂತೆ ಪ್ರಸಂಗಗಳಲ್ಲಿ ಮಾರ್ಪಾಡುಗಳನ್ನು ಮಾಡಬೇಕು. ಆ ಮೂಲಕ ಈ ಕಲೆ ಸಮಾಜಕ್ಕೆ ಒಳ್ಳೆಯ ಮೌಲ್ಯವನ್ನು ನೀಡುವಂತಾಗಬೇಕು” ಎಂದರು.

ಹಿರಿಯ ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, “ಅಭಿಮಾನಿಗಳ ಹಾರೈಕೆ ಯಕ್ಷಗಾನ ಕಲಾವಿದರಿಗೆ ಶ್ರೀರಕ್ಷೆಯಾಗಿದೆ. ಯಕ್ಷಗಾನ ಮೇಳವನ್ನು ನಡೆಸುವಾಗ ಅಪಾರ ಕಾಳಜಿ ವಹಿಸಬೇಕು” ಎಂದರು.