`ಆಹಾರ ವಸ್ತು ನ್ಯೂಸ್ ಪೇಪರುಗಳಲ್ಲಿ ಕಟ್ಟಿದರೆ ಅಪಾಯ ಕಟ್ಟಿಟ್ಟ ಬುತ್ತಿ’

ಮಂಗಳೂರು : ಆಹಾರ ವಸ್ತುಗಳನ್ನು ನ್ಯೂಸ್ ಪೇಪರುಗಳಲ್ಲಿ ಕಟ್ಟಬೇಡಿ, ಅದರಲ್ಲಿರುವ ಶಾಯಿಯ ಬಯೋ ಆಕ್ವಿವ್ ಕಣಗಳು ಆಹಾರದಲ್ಲಿ ಸೇರಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಎಂದು  ಭಾರತದ ಆಹಾರ ಸುರಕ್ಷತಾ ಪ್ರಾಧಿಕಾರ ಎಚ್ಚರಿಸಿದೆ.

“ಆಹಾರ  ಆರೋಗ್ಯಪೂರ್ಣವಾಗಿದ್ದರೂ ಅವುಗಳನ್ನು ನ್ಯೂಸ್ ಪೇಪರುಗಳಲ್ಲಿ ಸುತ್ತಿಟ್ಟರೆ ಅದು ಅನಾರೋಗ್ಯಪೂರ್ಣವಾಗುತ್ತದೆ” ಎಂದು ಪ್ರಾಧಿಕಾರ ಹೇಳಿದೆ.

ಮುದ್ರಣಕ್ಕೆ ಬಳಸುವ ಶಾಯಿಯಲ್ಲಿ ಹಾನಿಕಾರಕ ಬಣ್ಣ, ಪಿಗ್ಮೆಂಟ್, ಬೈಂಡರ್ ಮತ್ತು ಎಡಿಟಿವ್ಸ್ ಇದೆ. ಇವುಗಳ ಹೊರತಾಗಿ ಅದರಲ್ಲಿರುವ ರೋಗಕಾರಕ ಸೂಕ್ಷ್ಮಜೀವಿಗಳು ಮನುಷ್ಯನ ಆರೋಗ್ಯಕ್ಕೆ ಮಾರಕವಾಗಬಹುದು ಎಂದು ಪ್ರಾಧಿಕಾರ ನೀಡಿರುವ ಸೂಚನೆಯೊಂದರಲ್ಲಿ ತಿಳಿಸಲಾಗಿದೆ.

ರಿಸೈಕಲ್ ಮಾಡಲಾದ ಕಾಗದವನ್ನು ಉಪಯೋಗಿಸಿ ತಯಾರಿಸಲಾದ ಕಾಗದ ಹಾಗೂ ರಟ್ಟಿನ ಪೆಟ್ಟಿಗೆಗಳಲ್ಲ ಕೆಲ ಹಾನಿಕಾರಕ ರಾಸಾಯನಿಕಗಳಿದ್ದು ಇಂತಹ ಪೆಟ್ಟಿಗೆಗಳಲ್ಲಿ ಶೇಖರಿಸಿದ ಆಹಾರಗಳಿಂದಾಗಿ ಜೀರ್ಣಾಂಗ ವ್ಯವಸ್ಥೆಗೆ  ತೊಂದರೆಯಾಗಬಹುದು ಹಾಗೂ ಕ್ಯಾನ್ಸರ್ ಕಾಯಿಲೆಗೆ ಸಂಬಂಧಪಟ್ಟ ಆರೋಗ್ಯ ಸಮಸ್ಯೆಗಳೂ ಉದ್ಭವಿಸಬಹುದು.

ಎಲ್ಲಾ ರಾಜ್ಯಗಳ ಆಹಾರ ಸುರಕ್ಷತಾ ಆಯುಕ್ತರು ಈ ನಿಟ್ಟಿನಲ್ಲಿ ಜನರಲ್ಲಿ ಅರಿವನ್ನುಂಟು ಮಾಡುವ ಕಾರ್ಯ ಹಮ್ಮಿಕೊಳ್ಳಲಿದ್ದಾರೆಂದು ಪ್ರಾಧಿಕಾರ ತಿಳಿಸಿದೆ.