ಅಡ್ವೆ ಗರೋಡಿ ಬಳಿಯ ಹೊಳೆನೀರಲ್ಲಿ ಹುಳ !

ಸುತ್ತಲ ಮನೆಗಳಿಗೆ ಕುಡಿಯಲು ಟ್ಯಾಂಕರ್

ನೀರು ವಿತರಿಸಲು ಜಿ ಪಂ ಸಿಒ ಸೂಚನೆ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಅಡ್ವೆ ಗರೋಡಿ ಸಮೀಪದ ಪರಾಡಿ ತೋಟದ ಬಳಿಯ ಹೊಳೆಯ ಕಿಂಡಿ ಅಣ್ಣೆಕಟ್ಟು ಸಮೀಪ ನೀರು ಹುಳಗಳಾಗಿ ಕಪ್ಪು ಬಣ್ಣಕ್ಕೆ ತಿರುಗಿದ್ದಲ್ಲದೆ ಗಬ್ಬು ವಾಸನೆ ಬರುತ್ತಿದ್ದು, ಸ್ಥಳೀಯ ಬಾವಿಗಳ ನೀರು ಕೂಡಾ ಕುಡಿಯಲು ಯೋಗ್ಯವಾಗಿಲ್ಲದ ಕಾರಣ ಸ್ಥಳಕ್ಕಾಗಮಿಸಿದ ಜಿ ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುತ್ತಲ ಮನೆಗಳಿಗೆ ಕುಡಿಯಲು ಟ್ಯಾಂಕರ್ ನೀರು ವಿತರಿಸಲು ಗ್ರಾ ಪಂ ಗೆ ಸೂಚಿಸಿದ್ದಾರೆ.

ಕೃಷಿ ಚಟುವಟಿಕೆಗಾಗಿ ಹಾಗೂ ಬಾವಿಗಳ ಅಂತರ್ಜಲ ವೃದ್ಧಿಗಾಗಿ ಕಿಂಡಿ ಅಣ್ಣೆಕಟ್ಟನ್ನು ಕಟ್ಟಲಾಗಿದ್ದು, ಇದೀಗ ಆ ನೀರು ದುರ್ನಾತ ಬೀರುತ್ತಿರುವುದರಿಂದ ಇಡೀ ಪ್ರದೇಶ ಗಬ್ಬೆದ್ದು ನಾರುತ್ತಿದೆ. ಈ ಬಗ್ಗೆ ಸ್ಥಳೀಯ ತಾ ಪಂ ಸದಸ್ಯ ದಿನೇಶ್ ಕೋಟ್ಯಾನ್ ಗಮನಕ್ಕೆ ಸ್ಥಳೀಯರು ತಂದಿದ್ದು, ಪರಿಶೀಲಿಸಿದ ಅವರು ಸ್ಥಳೀಯ ಆರೋಗ್ಯ ಇಲಾಖಾ ಅಧಿಕಾರಿಗಳನ್ನು ಸ್ಥಳಕ್ಕೆ ಬರಮಾಡಿಕೊಂಡು ಅವರ ಮೂಲಕ ಸುತ್ತಲ ಬಾವಿಗಳ ನೀರನ್ನು ಪರೀಕ್ಷೆ ನಡೆಸಿದಾಗ, ಈ ನೀರುಗಳು ಕುಡಿಯಲು ಯೋಗ್ಯವಾಗಿದ್ದಲ್ಲ ಎಂಬ ವರದಿಯನ್ನು ವೈದ್ಯಾಧಿಕಾರಿಗಳು ನೀಡಿದ್ದಾರೆ.

ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತಂದಾಗ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕ, ತಾ ಪಂ ಕಾರ್ಯನಿರ್ವಹಣಾಧಿಕಾರಿ ಶೇಷಗಿರಿ, ಪರಿಸರ ಅಧಿಕಾರಿ ಎಚ್ ಲಕ್ಷ್ಮೀಕಾಂತ್ ಮುಂತಾದವರು ಸ್ಥಳಕ್ಕಾಗಮಿಸಿ  ಕಲುಷಿತಗೊಂಡ ನೀರಿನ ಮೂಲ ಹುಡುಕಲು ಯತ್ನಿಸಿದರಾದರೂ ವಿಫಲಗೊಂಡಿದ್ದಾರೆ.

ಪ್ರಮುಖವಾಗಿ ಯುಪಿಸಿಎಲ್ ಬೂದಿಹೊಂಡ ಸಹಿತ ನಂದಿಕೂರಿನ ಕೈಗಾರಿಕಾ ವಲಯದಲ್ಲಿ ಕಾರ್ಯಾಚರಿಸುತ್ತಿರುವ ಆಸ್ಪತ್ರೆ ತ್ಯಾಜ್ಯ ಸಂಸ್ಕರಣ ಘಟಕಕ್ಕೂ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಂತಿಮವಾಗಿ ಎಲ್ಲಾ ಭಾಗಗಳ ನೀರನ್ನು ಪಡೆದು ಅದನ್ನು ಲ್ಯಾಬಿನಲ್ಲಿ ಪರೀಕ್ಷೆಗೊಳಪಡಿಸಲಾಗುವುದೆಂದರು.

ಈ ಬಗ್ಗೆ ಮಾತನಾಡಿದ ಜಿ ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ, “ನೀರು ಸಂಪೂರ್ಣ ಕೆಟ್ಟು ಹೋಗಿರುವುದು ಕಂಡುಬಂತು. ಈ ಬಗ್ಗೆ ತಕ್ಷಣ ಸ್ಥಳೀಯ ವೈದ್ಯಾಧಿಕಾರಿಗಳಿಗೆ ಮದ್ದು ಸಿಂಪಡಿಸುವಂತೆ ಸೂಚಿಸಲಾಗುವುದು. ಅಲ್ಲದೆ ನೀರಿನ ಸಮಸ್ಯೆ ನೀಗುವವರಗೆ ಆ ಭಾಗದ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಆ ಭಾಗದ ಗ್ರಾಮ ಪಂಚಾಯಿತಿಗಳು ನಡೆಸುವಂತೆ ಪಿಡಿಒಗಳಿಗೆ ಸೂಚಿಸಲಾಗಿದೆ. ನೀರು ಹಾಳಾಗಿದ್ದು ಮೇಲು ನೋಟಕ್ಕೆ ದೃಢಪಡುತ್ತಿವೆಯಾದರೂ ಯಾವುದರಿಂದ ಹೀಗಾಗಿದೆ ಎಂಬುದು ತಿಳಿಯುತ್ತಿಲ್ಲ. ಈ ಬಗ್ಗೆ ಪರಿಸರ ಇಲಾಖೆ ನೀಡುವ ವರದಿಯ ಬಳಿಕ ಆ ವರದಿಯ ಆಧಾರದ ಮೇಲೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಹಾಗೂ ಆದ ಸಮಸ್ಯೆಯನ್ನು ಸಂಪೂರ್ಣ ಪರಿಹಾರ ಮಾಡಲಾಗುವುದು” ಎಂದು ತಿಳಿಸಿದ್ದಾರೆ.