ಪೊಲೀಸ್ ಅಧಿಕಾರಿ ಎದೆಯಿಂದ ಮರದ ತುಂಡು ತೆಗೆದ ವೈದ್ಯರು

ಹುಬ್ಬಳ್ಳಿ : ರಸ್ತೆ ದುರಂತವೊಂದರಲ್ಲಿ ಎದೆಗೆ ಮರದ ತುಂಡು ಹೊಕ್ಕಿದ್ದ ಸಬ್-ಇನ್ಸಪೆಕ್ಟರ್ ಶಸ್ತ್ರಚಿಕಿತ್ಸೆಯನ್ನು ನಡೆಸಿದ ಧಾರವಾಡದ ನಾರಾಯಣ ಹೃದಯಾಲಯದ ವೈದ್ಯರು ಸುಮಾರು 22.5 ಸೆಂ ಮೀ ಉದ್ದದ ಗೆಲ್ಲನ್ನು ಯಶಸ್ವಿಯಾಗಿ ಹೊರ ತೆಗೆದಿದ್ದಾರೆ.

ಕೊಪ್ಪಲ ಜಿಲ್ಲೆಯ ಕನಕಗಿರಿ ಪೊಲೀಸ್ ಠಾಣೆಯ ಅಸಿಸ್ಟೆಂಟ್ ಸಬ್-ಇನ್ಸಪೆಕ್ಟರ್ ಬಾಬುರಾವ್ ಜಗಪತಿ (55) ಅವರೇ ಶಸ್ತ್ರಚಿಕಿತ್ಸೆಗೆ ಒಳಗಾದ ಅಧಿಕಾರಿ. ಮರದ ಗೆಲ್ಲುಗಳನ್ನು ಹೇರಿಕೊಂಡು ಹೋಗುತ್ತಿದ್ದ ಟ್ರಾಕ್ಟರನ್ನು ಓವರಟೇಕ್ ಮಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಾಬುರಾವ್ ಅವರು ವಾಹನಕ್ಕೆ ಡಿಕ್ಕಿ ಹೊಡೆಸಿದ್ದರು. ಇದರಿಂದ ಅವರ ಹೃದಯಭಾಗಕ್ಕೆ ಮರದ ಗೆಲ್ಲಿನ ಚಿಕ್ಕ ಕೋಲೊಂದು ಒಳಹೊಕ್ಕಿತ್ತು. ತೀವ್ರ ರಸ್ತ ಸ್ರಾವವಾಗುತ್ತಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎಕ್ಸರೇ, ಸಿಟಿಸ್ಕ್ಯಾನ್ ಮತ್ತು ಅಲ್ಟ್ರಾಸೌಂಡ್ ಮೊದಲಾದ ಪರೀಕ್ಷೆಗಳಿಂದ ಎದೆಭಾಗದಲ್ಲಿ ಅದೇನೂ ಚುಚ್ಚಿಕೊಂಡಿರುವುದನ್ನು ವೈದ್ಯರು ಪತ್ತೆ ಹಚ್ಚಿದರು. ಕೂಡಲೇ ಅದನ್ನು ಹೊರತೆಗೆಯಲು ಶಸ್ತ್ರಚಿಕಿತ್ಸೆಯನ್ನು ನಡೆಸಿ, ಬಹಳಷ್ಟು ಮುನ್ನೆಚ್ಚರಿಕೆ ವಹಿಸಿ ಯಶಸ್ವಿ ಚಿಕಿತ್ಸೆ ನಡೆಸಿ ಆ ಗೆಲ್ಲನ್ನು ಹೃದಯದಿಂದ ಹೊರತೆಗೆದಿದ್ದಾರೆ.

“ಹೃದಯದ ಇತರ ಅತೀಸೂಕ್ಷ್ಮ ನರಗಳಿಗೆ ಏಟಾಗದಂತೆ ಶಸ್ತ್ರಚಿಕಿತ್ಸೆಯನ್ನು ನಡೆಸುವುದು ಕೂಡಾ ನಮಗೆ ತುಂಬಾ ಸವಾಲಾಗಿತ್ತು’ ಎಂದು ಚಿಕಿತ್ಸೆ ನಡೆಸಿದ ವೈದ್ಯರು ತಿಳಿಸಿದ್ದಾರೆ.